India vs Sri Lanka: ಶ್ರೀಲಂಕಾ ವಿರುದ್ಧ 5 ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ ಆಟಗಾರರು
TV9 Web | Updated By: ಝಾಹಿರ್ ಯೂಸುಫ್
Updated on:
Jan 04, 2023 | 5:05 PM
India vs Sri Lanka 1st T20I: ವಿಶೇಷ ಎಂದರೆ ಈ ಪಂದ್ಯದ ಮೂಲಕ ಭಾರತೀಯ ಆಟಗಾರರು ಹೊಸ ದಾಖಲೆಗಳನ್ನೂ ಕೂಡ ನಿರ್ಮಿಸಿದ್ದಾರೆ. ಹೀಗೆ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನಿರ್ಮಾಣವಾದ 5 ದಾಖಲೆಗಳು ಈ ಕೆಳಗಿನಂತಿದೆ....
1 / 6
India vs Sri Lanka 1st T20I: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡವು 2 ರನ್ಗಳಿಂದ ರೋಚಕ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ 2023 ರಲ್ಲಿ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ವಿಶೇಷ ಎಂದರೆ ಈ ಪಂದ್ಯದ ಮೂಲಕ ಭಾರತೀಯ ಆಟಗಾರರು ಹೊಸ ದಾಖಲೆಗಳನ್ನೂ ಕೂಡ ನಿರ್ಮಿಸಿದ್ದಾರೆ. ಹೀಗೆ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನಿರ್ಮಾಣವಾದ 5 ದಾಖಲೆಗಳು ಈ ಕೆಳಗಿನಂತಿದೆ....
2 / 6
ಮಾವಿ ಮಿಂಚಿಂಗ್: ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದರ್ಪಣೆ ಮಾಡಿದ ಯುವ ವೇಗಿ ಶಿವಂ ಮಾವಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 4 ಓವರ್ ಬೌಲಿಂಗ್ ಮಾಡಿದ್ದ ಮಾವಿ ಕೇವಲ 22 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆದಿದ್ದರು. ಈ ನಾಲ್ಕು ವಿಕೆಟ್ಗಳೊಂದಿಗೆ ಶ್ರೀಲಂಕಾ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಭುವನೇಶ್ವರ್ ಕುಮಾರ್ ಹೆಸರಿನಲ್ಲಿತ್ತು. 2012 ರಲ್ಲಿ ಲಂಕಾ ವಿರುದ್ಧ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಭುವಿ 9 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಇದೀಗ ಶ್ರೀಲಂಕಾ ವಿರುದ್ಧ ಪಾದರ್ಪಣಾ ಪಂದ್ಯದಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಶಿವಂ ಮಾವಿ 10 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ.
3 / 6
ಲಂಕಾ ದಹನ: ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ 18 ಗೆಲುವು ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದೆ. ಅಂದರೆ ಲಂಕಾ ವಿರುದ್ಧ ಚುಟುಕು ಕ್ರಿಕೆಟ್ನಲ್ಲಿ ಯಾವುದೇ ತಂಡ 18 ಜಯ ಸಾಧಿಸಿಲ್ಲ. ಇದೀಗ 18 ಬಾರಿ ಸೋಲುಣಿಸುವ ಮೂಲಕ ಟಿ20ಯಲ್ಲಿ ಶ್ರೀಲಂಕಾ ವಿರುದ್ಧ ಅತ್ಯಧಿಕ ಬಾರಿ ಗೆದ್ದ ತಂಡ ಹೆಗ್ಗಳಿಕೆಗೆ ಟೀಮ್ ಇಂಡಿಯಾ ಪಾತ್ರವಾಗಿದೆ.
4 / 6
ಹರ್ಷವಿಲ್ಲದ ಹರ್ಷಲ್: ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಹರ್ಷಲ್ ಪಟೇಲ್ ಹೀನಾಯ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿರುವುದು ವಿಶೇಷ. ಈ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ್ದ ಹರ್ಷಲ್ 41 ರನ್ ಬಿಟ್ಟುಕೊಟ್ಟಿದ್ದರು. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಕನಿಷ್ಠ 500 ಎಸೆತ ಎಸೆದಿರುವ ಬೌಲರ್ಗಳ ಪೈಕಿ ಕಳಪೆ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಬೌಲರ್ ಎನಿಸಿಕೊಂಡಿದ್ದಾರೆ. ಏಕೆಂದರೆ ಹರ್ಷಲ್ ಪಟೇಲ್ ಟಿ20 ಕ್ರಿಕೆಟ್ನಲ್ಲಿ 9.18 ಎಕನಾಮಿ ರೇಟ್ನಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಅಂದರೆ ಟಿ20 ಕ್ರಿಕೆಟ್ನಲ್ಲಿ 503 ಎಸೆತಗಳನ್ನು ಎಸೆದಿರುವ ಹರ್ಷಲ್ ಒಟ್ಟು 770 ರನ್ ಹೊಡೆಸಿಕೊಂಡಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಕನಿಷ್ಠ 500 ಬಾಲ್ ಮಾಡಿ ಅತೀ ಹೆಚ್ಚು ರನ್ ಬಿಟ್ಟು ಕೊಟ್ಟ ಭಾರತೀಯ ಬೌಲರ್ ಎಂಬ ಹೀನಾಯ ದಾಖಲೆಯನ್ನು ಹರ್ಷಲ್ ಪಟೇಲ್ ತಮ್ಮದಾಗಿಸಿಕೊಂಡಿದ್ದಾರೆ.
5 / 6
ಭರ್ಜರಿ ಪ್ರದರ್ಶನ: ವಾಂಖೆಡೆ ಸ್ಟೇಡಿಯಂನಲ್ಲಿ ಅತೀ ಕಡಿಮೆ ಗುರಿಯನ್ನು ಉಳಿಸಿ ಪಂದ್ಯ ಗೆದ್ದ ದಾಖಲೆ ಟೀಮ್ ಇಂಡಿಯಾ ಪಾಲಾಗಿದೆ. ಈ ಹಿಂದೆ 2016 ರಲ್ಲಿ ಸೌತ್ ಆಫ್ರಿಕಾ ತಂಡವು 210 ರನ್ಗಳ ಟಾರ್ಗೆಟ್ ನೀಡಿ ಅಫ್ಘಾನಿಸ್ತಾನ್ ವಿರುದ್ಧ ಗೆಲುವು ಸಾಧಿಸಿತ್ತು. ಇದೀಗ ಚೇಸಿಂಗ್ ಪಿಚ್ನಲ್ಲಿ ಟೀಮ್ ಇಂಡಿಯಾ 163 ರನ್ಗಳ ಗುರಿ ನೀಡಿ 2 ರನ್ಗಳಿಂದ ರೋಚಕ ಜಯ ಸಾಧಿಸಿದೆ. ಅಂದರೆ ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿ ಕಡಿಮೆ ಮೊತ್ತಗಳಿಸಿ ಜಯ ಸಾಧಿಸಿದ ತಂಡಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನಕ್ಕೇರಿದೆ.
6 / 6
ಬೆಂಕಿ ಬೌಲಿಂಗ್: ಟೀಮ್ ಇಂಡಿಯಾ ಪರ ಅತ್ಯಂತ ವೇಗವಾಗಿ ಚೆಂಡೆಸೆದ ದಾಖಲೆ ಇದೀಗ ಉಮ್ರಾನ್ ಮಲಿಕ್ ಪಾಲಾಗಿದೆ. ಲಂಕಾ ವಿರುದ್ಧದ ಪಂದ್ಯದಲ್ಲಿ ಮಲಿಕ್ 155 ಕಿ.ಮೀ ವೇಗದಲ್ಲಿ ಬೌಲ್ ಮಾಡಿ ಬುಮ್ರಾ ಹೆಸರಿನಲ್ಲಿದ್ದ ದಾಖಲೆ ಮುರಿದರು. ಈ ಹಿಂದೆ ಬುಮ್ರಾ 153.36 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಇದೀಗ 155 ಕಿ.ಮೀ ಚೆಂಡೆಸೆದಿರುವ ಉಮ್ರಾನ್ ಮಲಿಕ್ ಟೀಮ್ ಇಂಡಿಯಾದ ಸ್ಪೀಡ್ ಕಿಂಗ್ ಎನಿಸಿಕೊಂಡಿದ್ದಾರೆ.
Published On - 5:03 pm, Wed, 4 January 23