- Kannada News Photo gallery Cricket photos Deepak Hooda and Axar Patel breaks 13 Years Old Record Kannada News zp
Deepak Hooda – Axar Patel: 13 ವರ್ಷಗಳ ಹಳೆಯ ದಾಖಲೆ ಮುರಿದ ದೀಪಕ್ ಹೂಡಾ-ಅಕ್ಷರ್ ಪಟೇಲ್
India vs Sri Lanka 1st T20: ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಮ್ ಇಂಡಿಯಾ ಹೊಸ ವರ್ಷದಲ್ಲಿ ಶುಭಾರಂಭ ಮಾಡಿದೆ.
Updated on:Jan 03, 2023 | 11:31 PM

ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 2 ರನ್ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿಗಳೆಂದರೆ ದೀಪಕ್ ಹೂಡಾ, ಅಕ್ಷರ್ ಪಟೇಲ್ ಹಾಗೂ ಶಿವಂ ಮಾವಿ.

ದೀಪಕ್ ಹೂಡಾ ಹಾಗೂ ಅಕ್ಷರ್ ಪಟೇಲ್ ಆಲ್ರೌಂಡರ್ ಪ್ರದರ್ಶನ ನೀಡಿದ್ರೆ, ಶಿವಂ ಮಾವಿ 4 ವಿಕೆಟ್ ಕಬಳಿಸಿ ಮಿಂಚಿದರು. ವಿಶೇಷ ಎಂದರೆ 14.1 ಓವರ್ಗಳಲ್ಲಿ 94 ರನ್ಗೆ 5 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಮ್ ಇಂಡಿಯಾಗೆ ದೀಪಕ್ ಹೂಡಾ ಹಾಗೂ ಅಕ್ಷರ್ ಪಟೇಲ್ ಆಸರೆಯಾದರು. ಅಲ್ಲದೆ ಇಡೀ ಪಂದ್ಯದ ಚಿತ್ರಣವನ್ನು ಬದಲಿಸಿದ್ದರು.

6ನೇ ವಿಕೆಟ್ ವಿಕೆಟ್ಗೆ ಜೊತೆಯಾದ ದೀಪಕ್ ಹೂಡಾ (41 ರನ್, 23 ಎಸೆತ) ಹಾಗೂ ಅಕ್ಷರ್ ಪಟೇಲ್ (31 ರನ್, 20 ಎಸೆತ) ಅಂತಿಮ ಹಂತದಲ್ಲಿ 35 ಎಸೆತಗಳನ್ನು ಎದುರಿಸಿ 68 ರನ್ ಚಚ್ಚಿದರು. ಪರಿಣಾಮ ಟೀಮ್ ಇಂಡಿಯಾ ಮೊತ್ತ 162 ಕ್ಕೆ ಬಂದು ನಿಂತಿತು. ವಿಶೇಷ ಎಂದರೆ ಈ 68 ರನ್ಗಳೊಂದಿಗೆ ಹೂಡಾ-ಅಕ್ಷರ್ ಜೋಡಿ 13 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ 6ನೇ ವಿಕೆಟ್ಗೆ ಮೂಡಿಬಂದ 2ನೇ ಅತ್ಯುತ್ತಮ ಜೊತೆಯಾಟ 63 ರನ್ಗಳು. 2009 ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಮಹೇಂದ್ರ ಸಿಂಗ್ ಧೋನಿ ಹಾಗೂ ಯೂಸುಫ್ ಪಠಾಣ್ 63 ರನ್ಗಳ ಜೊತೆಯಾಟವಾಡಿದ್ದರು.

ಇದೀಗ ದೀಪಕ್ ಹೂಡಾ ಹಾಗೂ ಅಕ್ಷರ್ ಪಟೇಲ್ 6ನೇ ವಿಕೆಟ್ಗೆ 68 ರನ್ ಕಲೆಹಾಕುವ ಮೂಲಕ ಧೋನಿ ಹಾಗೂ ಯೂಸುಫ್ ಪಠಾಣ್ ಹೆಸರಿನಲ್ಲಿದ್ದ 13 ವರ್ಷಗಳ ಹಳೆಯ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ 6ನೇ ವಿಕೆಟ್ನ ಅತ್ಯುತ್ತಮ ಜೊತೆಯಾಟದ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ.

ಅಂದಹಾಗೆ ಟೀಮ್ ಇಂಡಿಯಾ ಪರ ಟಿ20 ಯಲ್ಲಿ 6ನೇ ವಿಕೆಟ್ಗೆ ಮೂಡಿಬಂದ ಅತ್ಯುತ್ತಮ ಜೊತೆಯಾಟ 70 ರನ್ಗಳು. 2021 ರಲ್ಲಿ ಇಂಗ್ಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಈ ದಾಖಲೆ ಬರೆದಿದ್ದರು. ಇದೀಗ 68 ರನ್ಗಳ ಜೊತೆಯಾಟದೊಂದಿಗೆ ಅಕ್ಷರ್ ಪಟೇಲ್ ಹಾಗೂ ದೀಪಕ್ ಹೂಡಾ ಈ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿರುವುದು ವಿಶೇಷ.
Published On - 11:31 pm, Tue, 3 January 23



















