
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಗೆಲುವಿನ ಸನಿಹದಲ್ಲಿದೆ. 121 ರನ್ಗಳ ಗುರಿ ಬೆನ್ನಟ್ಟಿರುವ ಟೀಂ ಇಂಡಿಯಾ ನಾಲ್ಕನೇ ದಿನದ ಆಟ ಮುಗಿದಾಗ 1 ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿತ್ತು. ಹೀಗಾಗಿ ಭಾರತದ ಗೆಲುವಿಗೆ ಇನ್ನೂ 58 ರನ್ಗಳ ಅಗತ್ಯವಿದೆ. ಇದನ್ನು ನೋಡಿದರೆ, ಟೀಂ ಇಂಡಿಯಾ 2ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವುದ ಖಚಿತವಾಗಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನೀಡಿದ ವೆಸ್ಟ್ ಇಂಡೀಸ್ 390 ರನ್ ಕಲೆಹಾಕಿತು. ತಂಡದ ಪರ ಎರಡು ಶತಕಗಳು ದಾಖಲಾದವು. ಇತ್ತ ಭಾರತದ ಪರ ಅತ್ಯಂತ ಯಶಸ್ವಿ ಬೌಲರ್ಳು ಎನಿಸಿಕೊಂಡ ಕುಲ್ದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ ಮೂರು ವಿಕೆಟ್ ಪಡೆದರೆ, ಸಿರಾಜ್ ಎರಡು ವಿಕೆಟ್, ಜಡೇಜ ಮತ್ತು ಸುಂದರ್ ತಲಾ ಒಂದು ವಿಕೆಟ್ ಪಡೆದರು.

ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ 33 ಓವರ್‌ಗಳನ್ನು ಬೌಲಿಂಗ್ ಮಾಡಿ 102 ರನ್ ನೀಡಿ 1 ವಿಕೆಟ್ ಪಡೆದರು. ಈ ಒಂದು ವಿಕೆಟ್ ಪಡೆಯುವ ಮೂಲಕ ರವೀಂದ್ರ ಜಡೇಜಾ, ಹರ್ಭಜನ್ ಸಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೆ ಅನಿಲ್ ಕುಂಬ್ಳೆ ಹಾಗೂ ಅಶ್ವಿನ್ ನಂತರದ ಸ್ಥಾನ ಪಡೆದುಕೊಂಡಿದ್ದಾರೆ

ರವೀಂದ್ರ ಜಡೇಜಾ ಆರಂಭಿಕ ಆಟಗಾರ ಜಾನ್ ಕ್ಯಾಂಪ್ಬೆಲ್ ಅವರ ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ತವರಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಆಟಗಾರರ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಇದೀಗ ಮೂರನೇ ಸ್ಥಾನಕ್ಕೇರಿದ್ದಾರೆ. ಹಾಗೆಯೇ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ಹಿಂದಿಕ್ಕಿದ್ದಾರೆ.

ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಭಾರತದ ನಡೆದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 376 ವಿಕೆಟ್ ಪಡೆದಿದ್ದರೆ, ಇದೀಗ ರವೀಂದ್ರ ಜಡೇಜಾ ಅವರ ಖಾತೆಯಲ್ಲಿ 377 ವಿಕೆಟ್ಗಳಿವೆ. ಕನ್ನಡಿಗ ಅನಿಲ್ ಕುಂಬ್ಳೆ 476 ವಿಕೆಟ್ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, 475 ವಿಕೆಟ್ಗಳನ್ನು ಹೊಂದಿರುವ ಆರ್ ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ 19 ಓವರ್‌ಗಳನ್ನು ಬೌಲಿಂಗ್ ಮಾಡಿ 3 ವಿಕೆಟ್ ಪಡೆದಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ವಿಕೆಟ್ ಮಾತ್ರ ಪಡೆದರು. ಬೌಲಿಂಗ್ ಮಾತ್ರವಲ್ಲದೆ, ಜಡೇಜಾ ಬ್ಯಾಟಿಂಗ್‌ನಲ್ಲೂ ಮಿಂಚುತಿದ್ದಾರೆ. ಅದರಂತೆ ಈ ಸರಣಿಯಲ್ಲಿ ಜಡೇಜಾರಿಂದ ಒಂದು ಶತಕದ ಇನ್ನಿಂಗ್ಸ್ ಕೂಡ ಮೂಡಿಬಂದಿದೆ.