Updated on: May 30, 2023 | 6:06 PM
ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ಗೆ (IPL 2023) ತೆರೆ ಬಿದ್ದಿದೆ. ಸೋಮವಾರ ಅಹಮದಾಬಾದ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಜಯ ಸಾಧಿಸಿ ಚೆನ್ನೈ ಸೂಪರ್ ಕಿಂಗ್ಸ್ (CSK) ಚಾಂಪಿಯನ್ ಪಟ್ಟಕ್ಕೇರಿದೆ. ಇದರೊಂದಿಗೆ ಐಪಿಎಲ್ ಸೀಸನ್ 16 ಗೂ ತೆರೆಬಿದ್ದಂತಾಗಿದೆ.
ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಭಾರತ ತಂಡದ ಆಟಗಾರರು ಇಂಗ್ಲೆಂಡ್ನತ್ತ ಪ್ರಯಾಣಿಸಲಿದ್ದಾರೆ. ಏಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದೊಂದಿಗೆ ಮತ್ತೆ ಭಾರತದ ಸರಣಿ ಶುರುವಾಗಲಿದೆ. ಹಾಗಿದ್ರೆ ಟೀಮ್ ಇಂಡಿಯಾದ ಮುಂದಿರುವ ಪ್ರಮುಖ ಪಂದ್ಯಗಳಾವುವು ಎಂಬುದನ್ನು ನೋಡೋಣ...
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯವು ಜೂ.7 ರಿಂದ ಶುರುವಾಗಲಿದೆ. ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ನಡೆಯಲಿರುವ ಟೆಸ್ಟ್ ಕ್ರಿಕೆಟ್ನ ಫೈನಲ್ ಫೈಟ್ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಅಂದರೆ ಟೀಮ್ ಇಂಡಿಯಾದ ಮುಂದಿನ ಎದುರಾಳಿ ಕೂಡ ಆಸ್ಟ್ರೇಲಿಯಾ ತಂಡ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕಠಿಣ ಪೈಪೋಟಿ ಎದುರಿಸುವುದು ಖಚಿತ.
ಇದಾದ ಬಳಿಕವಷ್ಟೇ ಟೀಮ್ ಇಂಡಿಯಾ ಮುಂದಿನ ಸರಣಿಗಳನ್ನು ಆಡಲಿದೆ. ಭಾರತ ಕ್ರಿಕೆಟ್ ತಂಡದ ವಾರ್ಷಿಕ ವೇಳಾಪಟ್ಟಿ ಪ್ರಕಾರ, ಜುಲೈನಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಆಡಲಿದೆ. ವೇಳಾಪಟ್ಟಿ ನಿಗದಿಯಾಗದ ಈ ಸರಣಿಯಲ್ಲಿ 2 ಟೆಸ್ಟ್, ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನಾಡಲಾಗುತ್ತದೆ.
ಇದರ ನಡುವೆ ಅಫ್ಘಾನಿಸ್ತಾನ್ ವಿರುದ್ಧ ಕೂಡ 3 ಪಂದ್ಯಗಳ ಏಕದಿನ ಸರಣಿ ಆಡಲಿದ್ದು, ಈ ಸರಣಿಯ ವೇಳಾಪಟ್ಟಿಯನ್ನು ಇನ್ನೂ ಕೂಡ ನಿರ್ಧರಿಸಿಲ್ಲ.
ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಮುಂದೆ ಏಷ್ಯಾಕಪ್ ಸವಾಲು ಎದುರಾಗಲಿದೆ. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸಲಿರುವ ಏಷ್ಯಾಕಪ್ ವೇಳಾಪಟ್ಟಿ ಕೂಡ ನಿಗದಿಯಾಗಿಲ್ಲ. ಆದರೆ ಸೆಪ್ಟೆಂಬರ್ನಲ್ಲಿ ಏಷ್ಯಾಕಪ್ ನಡೆಯುವುದು ಬಹುತೇಕ ಖಚಿತವಾಗಿದೆ.
ಆ ಬಳಿಕ ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಮತ್ತೊಮ್ಮೆ ಆಗಮಿಸಲಿದೆ. ಈ ಸರಣಿಯಲ್ಲಿ ಉಭಯ ತಂಡಗಳು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
ಇನ್ನು ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಜರುಗಲಿದ್ದು, 2 ತಿಂಗಳುಗಳ ಕಾಲ 10 ತಂಡಗಳ ನಡುವೆ ಕ್ರಿಕೆಟ್ ಕದನ ನಡೆಯಲಿದೆ.
ಇದಾದ ಬಳಿಕ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದರ ನಂತರ ಟೀಮ್ ಇಂಡಿಯಾ ಡಿಸೆಂಬರ್ನಲ್ಲಿ ಸೌತ್ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಅಂದರೆ ಮುಂದಿನ ಆರೇಳು ತಿಂಗಳಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧವೇ ಹೆಚ್ಚಿನ ಪಂದ್ಯಗಳನ್ನು ಆಡುತ್ತಿರುವುದು ವಿಶೇಷ.