Virat Kohli: ಕಿಂಗ್ ಈಸ್ ಬ್ಯಾಕ್: 10ನೇ ಪಂದ್ಯದಲ್ಲಿ ಮೊದಲ ಅರ್ಧಶತಕ ಬಾರಿಸಿದ ಕೊಹ್ಲಿ
IPL 2022, GT vs RCB: ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಉತ್ತಮ ಸಾಥ್ ನೀಡಿದ ರಜತ್ ಪಾಟಿದಾರ್ ಐಪಿಎಲ್ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿ ಗಮನ ಸೆಳೆದರು. 32 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಬೌಂಡರಿಯೊಂದಿಗೆ 52 ರನ್ ಬಾರಿಸಿದರು.
Updated on: Apr 30, 2022 | 5:04 PM

ಐಪಿಎಲ್ ಸೀಸನ್ 15 ನಲ್ಲಿ ಸತತ ವಿಫಲರಾಗಿದ್ದ ವಿರಾಟ್ ಕೊಹ್ಲಿ ಕೊನೆಗೂ ತಮ್ಮ ಫಾರ್ಮ್ಗೆ ಮರಳಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ದದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿ ಈ ಸೀಸನ್ನ ಮೊದಲ ಅರ್ಧಶತಕ ಪೂರೈಸಿದ ಬ್ಯಾಟ್ ಮೇಲೆಕ್ಕತ್ತಿದ್ದರು.

ಇದಕ್ಕೂ ಮುನ್ನ ಕಳೆದ 3 ಪಂದ್ಯಗಳಲ್ಲಿ ಕೊಹ್ಲಿ ಎರಡು ಬಾರಿ ಝೀರೋಗೆ ಔಟ್ ಆಗಿದ್ದರು. ಅಲ್ಲದೆ ರಾಜಸ್ಥಾನ್ ರಾಯಲ್ಸ್ ವಿರುದ್ದ ಕೇವಲ 9 ರನ್ಗೆ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ ಕೊಹ್ಲಿಯನ್ನು ತಂಡದಿಂದ ಕೈಬಿಡಬೇಕೆಂಬ ಕೂಗುಗಳು ಕೇಳಿ ಬಂದಿತ್ತು.

ಆದರೀಗ ಈ ಬಾರಿಯ ಅತ್ಯುತ್ತಮ ಬೌಲಿಂಗ್ ಲೈನಪ್ ಹೊಂದಿರುವ ಗುಜರಾತ್ ಟೈಟನ್ಸ್ ವಿರುದ್ದದ ಪಂದ್ಯದಲ್ಲಿ 45 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಮತ್ತೆ ತಮ್ಮ ಹಳೆಯ ಖದರ್ ತೋರಿಸಿದ್ದಾರೆ.

ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದ ಕೊಹ್ಲಿ ತಮ್ಮ ಇನಿಂಗ್ಸ್ ಉದ್ದಕ್ಕೂ ಆತ್ಮ ವಿಶ್ವಾಸದಿಂದಲೇ ಬ್ಯಾಟ್ ಬೀಸಿದ್ದರು. ಈ ಮೂಲಕ ಐಪಿಎಲ್ನ 43ನೇ ಅರ್ಧಶತಕ ಪೂರೈಸಿದರು. ಅಲ್ಲದೆ ಅಂತಿಮವಾಗಿ 53 ಎಸೆತಗಳಲ್ಲಿ 6 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 58 ರನ್ಗಳಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು.

ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಉತ್ತಮ ಸಾಥ್ ನೀಡಿದ ರಜತ್ ಪಾಟಿದಾರ್ ಐಪಿಎಲ್ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿ ಗಮನ ಸೆಳೆದರು. 32 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಬೌಂಡರಿಯೊಂದಿಗೆ 52 ರನ್ ಬಾರಿಸಿ ಪಾಟಿದಾರ್ ಪ್ರದೀಪ್ ಸಾಂಗ್ವಾನ್ ಎಸೆತದಲ್ಲಿ ಔಟಾದರು.



















