- Kannada News Photo gallery Cricket photos IPL 2022 Mega Auctions: Ahmedabad IPL franchise issue almost sorted
IPL 2022 Mega Auctions: ಐಪಿಎಲ್ನ ಹೊಸ ತಂಡಕ್ಕೆ ಬಿಗ್ ರಿಲೀಫ್..!
IPL 2022 Mega Auctions: ಈ ಹಿಂದೆ 2013ರ ಐಪಿಎಲ್ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣದಿಂದಾಗಿ ಐಪಿಎಲ್ ವೀಕ್ಷಕರು ಟೂರ್ನಿಯ ಬಗ್ಗೆ ನಂಬಿಕೆ ಕಳೆದುಕೊಂಡಿದ್ದರು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಎರಡು ವರ್ಷಗಳ ಕಾಲ ಬ್ಯಾನ್ ಮಾಡಲಾಗಿತ್ತು.
Updated on: Dec 05, 2021 | 10:10 PM

ಮುಂದಿನ ಸೀಸನ್ ಮೆಗಾ ಹರಾಜಿನಲ್ಲಿ ಪ್ರಸ್ತುತ ಇರುವ 8 ತಂಡಗಳ ಜೊತೆಗೆ ಹೊಸ ಫ್ರಾಂಚೈಸಿಗಳಾದ ಅಹಮದಾಬಾದ್ ಹಾಗೂ ಲಕ್ನೋ ತಂಡಗಳು ಕಾಣಿಸಿಕೊಳ್ಳಲಿದೆ. ಈ ಹಿಂದೆ ಅಹಮದಾಬಾದ್ ಫ್ರಾಂಚೈಸಿಯನ್ನು ಖರೀದಿಸಿದ CVC ಕ್ಯಾಪಿಟಲ್ ಪಾರ್ಟ್ನರ್ಸ್ ಮಾಲೀಕತ್ವವನ್ನು ಅಪಸ್ವರಗಳು ಕೇಳಿ ಬಂದಿದ್ದವು. ಈ ಕಂಪೆನಿಯು ಬೆಟ್ಟಿಂಗ್ ಕಂಪನಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದ ಕಾರಣ ಸಿವಿಸಿ ಮಾಲೀಕತ್ವನ್ನು ರದ್ದು ಮಾಡಲಿದೆ ಎನ್ನಲಾಗಿತ್ತು. ಇದೀಗ ಈ ಬಗ್ಗೆ ಚರ್ಚೆ ನಡೆಸಿರುವ ಬಿಸಿಸಿಐ, ಸಿವಿಸಿ ಕ್ಯಾಪಿಟಲ್ ಮಾಲೀಕರನ್ನೇ ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

ಕ್ಯಾಪಿಟಲ್ ಪಾರ್ಟ್ನರ್ಸ್ ಖಾಸಗಿ ಇಕ್ವಿಟಿ ಮತ್ತು ಹೂಡಿಕೆ ಸಲಹಾ ಸಂಸ್ಥೆಯಾಗಿದ್ದು, ಯುರೋಪಿಯನ್ ಮತ್ತು ಏಷ್ಯಾದ ಅನೇಕ ಬೆಟ್ಟಿಂಗ್ ಹಾಗೂ ಜೂಜಾಟ ಕಂಪೆನಿಗಳು ಹೂಡಿಕೆಯನ್ನು ಮಾಡಿದೆ. ಕಂಪೆನಿಯ ಬೆಟ್ಟಿಂಗ್ ವ್ಯವಹಾರ ವಿಚಾರ ಬಿಸಿಸಿಐಗೆ ಹೊಸ ಸಮಸ್ಯೆಯಾಗಿ ಪರಿಣಮಿಸಿತ್ತು. ಹೀಗಾಗಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಭೆ ನಡೆಸಿತ್ತು. ಇದೀಗ ಸಭೆಯಲ್ಲೂ CVC ಕ್ಯಾಪಿಟಲ್ ಪಾರ್ಟ್ನರ್ಸ್ ಮಾಲೀಕತ್ವದ ಬಗ್ಗೆ ವಾದಗಳನ್ನು ಮುಂದಿಡಲಾಗಿದ್ದು, ಅದರಂತೆ ಇದೇ ಕಂಪೆನಿಯೇ ಅಹಮದಾಬಾದ್ ಫ್ರಾಂಚೈಸಿಯ ಮಾಲೀಕರಾಗಿ ಉಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

ಈ ಹಿಂದೆ 2013ರ ಐಪಿಎಲ್ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣದಿಂದಾಗಿ ಐಪಿಎಲ್ ವೀಕ್ಷಕರು ಟೂರ್ನಿಯ ಬಗ್ಗೆ ನಂಬಿಕೆ ಕಳೆದುಕೊಂಡಿದ್ದರು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಎರಡು ವರ್ಷಗಳ ಕಾಲ ಬ್ಯಾನ್ ಮಾಡಲಾಗಿತ್ತು. ಆದರೆ ಈ ಬಾರಿ ಬೆಟ್ಟಿಂಗ್ ವ್ಯವಹಾರದೊಂದಿಗೆ ನೇರ ಸಂಪರ್ಕ ಹೊಂದಿರುವ ಕಂಪೆನಿಗೆ ಹೊಸ ಫ್ರಾಂಚೈಸಿಯನ್ನು ನೀಡಿರುವುದು ಚರ್ಚೆಗೆ ಕಾರಣವಾಗಿತ್ತು.

ಆದರೆ ಐಪಿಎಲ್ ಬಿಡ್ಡಿಂಗ್ ವೇಳೆಯೇ CVC ಕ್ಯಾಪಿಟಲ್ ಪಾರ್ಟ್ನರ್ಸ್ ಪಾರದರ್ಶಕವಾಗಿ ನಡೆದುಕೊಂಡಿದ್ದು, ತಾನು ಹೂಡಿಕೆ ಮಾಡಿರುವ ಎಲ್ಲಾ ವ್ಯವಹಾರಗಳನ್ನು ಸಂಪೂರ್ಣ ವರದಿ ಸಲ್ಲಿಸಿತ್ತು. ಈ ವೇಳೆ ಪರಿಶೀಲಿಸಿಯೇ ಬಿಡ್ಡಿಂಗ್ಗೆ ಅವಕಾಶ ನೀಡಲಾದ ಕಾರಣ ಇದೀಗ ಕಂಪೆನಿಯ ಮಾಲೀಕತ್ವವನ್ನು ರದ್ದು ಮಾಡುವುದರಲ್ಲಿ ಅರ್ಥವಿಲ್ಲ ಎಂಬ ಅಭಿಪ್ರಾಯ ಮೂಡಿಬಂದಿದೆ. ಹೀಗಾಗಿ ಅಹಮದಾಬಾದ್ ಫ್ರಾಂಚೈಸಿಯಾಗಿ ಸಿವಿಸಿ ಕಂಪೆನಿಯೇ ತಂಡವನ್ನು ಮುನ್ನಡೆಸಲಿದ್ದಾರೆ.

ಇನ್ನು ಸಿವಿಸಿ ಮಾಲೀಕತ್ವದ ಚರ್ಚೆಯ ಕಾರಣದಿಂದಲೇ ಅಹಮದಾಬಾದ್ ತಂಡವು ಮೆಗಾ ಹರಾಜಿನ ಸಿದ್ದತೆಗಳನ್ನು ಶುರು ಮಾಡಿರಲಿಲ್ಲ. ಇದೀಗ ಬಿಸಿಸಿಐ ಕಡೆಯಿಂದ ಅಹಮದಾಬಾದ್ ಫ್ರಾಂಚೈಸಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಹೀಗಾಗಿ ಶೀಘ್ರದಲ್ಲೇ ಹೊಸ ತಂಡ ಕಟ್ಟುವ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಅದರಂತೆ ಮುಂದಿನ ಮೆಗಾ ಹರಾಜಿನಲ್ಲಿ 7,090 ಕೋಟಿ ರೂ. ನೀಡಿ RPSG ಗ್ರೂಪ್ ಖರೀದಿಸಿದ ಲಕ್ನೋ ಫ್ರಾಂಚೈಸಿ ಹಾಗೂ 5625 ಕೋಟಿ ರೂ. ನೀಡಿ CVC ಕ್ಯಾಪಿಟಲ್ ಪಾರ್ಟ್ನರ್ಸ್ ಖರೀದಿಸಿದ ಅಹಮದಾಬಾದ್ ತಂಡಗಳು ಐಪಿಎಲ್ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲಿದೆ.
