
ಟಿ20 ಕ್ರಿಕೆಟ್ನ ಅತ್ಯಂತ ಯಶಸ್ವಿ ವೇಗಿಗಳಲ್ಲಿ ಒಬ್ಬರೆನಿಸಿಕೊಂಡಿರುವ ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದು ಕೇವಲ 2 ಬಾರಿ ಮಾತ್ರ. 2014 ರಲ್ಲಿ ಹರಾಜಿನಲ್ಲಿದ್ದ ಸ್ಟಾರ್ಕ್ ಅವರನ್ನು RCB ತಂಡ ಖರೀದಿಸಿತ್ತು. ಆರ್ಸಿಬಿ ಪರ 2 ಸೀಸನ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಸ್ಟಾರ್ಕ್ 27 ಪಂದ್ಯಗಳಿಂದ 34 ವಿಕೆಟ್ ಕಬಳಿಸಿದ್ದರು. ಇದಾದ ಬಳಿಕ ಸ್ಟಾರ್ಕ್ ಐಪಿಎಲ್‌ನಲ್ಲಿ ಭಾಗವಹಿಸಿರಲಿಲ್ಲ. ಇದಾಗ್ಯೂ 2018 ರಲ್ಲಿ ಮಿಚೆಲ್ ಸ್ಟಾರ್ಕ್ ಹೆಸರು ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿತ್ತು.

ನಿರೀಕ್ಷೆಯಂತೆ ಆಸ್ಟ್ರೇಲಿಯಾ ಎಡಗೈ ವೇಗಿಯ ಖರೀದಿಗಾಗಿ ಎಲ್ಲಾ ಫ್ರಾಂಚೈಸಿಗಳು ಪೈಪೋಟಿ ನಡೆಸಿತ್ತು. ಅಂತಿಮವಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 9.40 ಕೋಟಿ ರೂ. ನೀಡಿ ಸ್ಟಾರ್ಕ್ ಅವರನ್ನು ಖರೀದಿಸಿತ್ತು. ಆದರೆ ಗಾಯದ ಕಾರಣ ಮಿಚೆಲ್ ಸ್ಟಾರ್ಕ್ ಟೂರ್ನಿಯಿಂದ ಹಿಂದೆ ಸರಿದಿದ್ದರು. ಆ ಬಳಿಕ ಐಪಿಎಲ್‌ನಲ್ಲಿ ಮತ್ತೆ ಕಾಣಿಸಿಕೊಂಡಿರಲಿಲ್ಲ.

ಇದಾಗ್ಯೂ ಈ ಬಾರಿ ಮಿಚೆಲ್ ಸ್ಟಾರ್ಕ್ ಐಪಿಎಲ್‌ನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಮೆಗಾ ಹರಾಜು ಪಟ್ಟಿಗೆ ಹೆಸರು ನೀಡಿರುವ 59 ಆಸ್ಟ್ರೇಲಿಯಾ ಆಟಗಾರರಲ್ಲಿ ಸ್ಟಾರ್ಕ್ ಹೆಸರು ಇಲ್ಲದಿರುವುದು ಕನ್ಫರ್ಮ್ ಆಗಿದೆ. ಐಪಿಎಲ್‌ನಲ್ಲಿ ಅತ್ಯುತ್ತಮ ಬೇಡಿಕೆ ಹೊಂದಿದ್ದರೂ ಸ್ಟಾರ್ಕ್ ಟೂರ್ನಿಯಿಂದ ಹಿಂದೆ ಸರಿದಿರುವ ಕಾರಣವನ್ನೂ ಕೂಡ ಬಹಿರಂಗಪಡಿಸಿದ್ದಾರೆ.

ಐಪಿಎಲ್ ಬಯೋ ಬಬಲ್ನಲ್ಲಿ ನಡೆಯಲಿದೆ. ಅಂದರೆ 22 ವಾರಗಳ ಕಾಲ ನಾವು ಬಯೋ ಬಬಲ್ನಲ್ಲಿ ಕಾಲ ಕಳೆಯಬೇಕಾಗುತ್ತದೆ. ಅಷ್ಟೊಂದು ದಿನಗಳ ಕಾಲ ಜೈವಿಕ ಸುರಕ್ಷತಾ ವಲಯದಲ್ಲಿರಲು ನಾನು ಬಯಸುತ್ತಿಲ್ಲ. ಹೀಗಾಗಿ ಕೊನೆಯ ಘಳಿಗೆಯಲ್ಲಿ ಐಪಿಎಲ್ ಹರಾಜಿನಿಂದ ಹೊರಗುಳಿದಿರುವುದಾಗಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ತಿಳಿಸಿದ್ದಾರೆ.

'ನಾನು ಐಪಿಎಲ್‌ಗೆ ಹಿಂತಿರುಗುವ ಸಮಯ ಬರುತ್ತದೆ. ಆದರೆ ಆಸ್ಟ್ರೇಲಿಯಾ ಪರ ಎಷ್ಟು ಸಾಧ್ಯವೋ ಅಷ್ಟು ಆಡಲು ಬಯಸುತ್ತೇನೆ. ಹೀಗಾಗಿ ಐಪಿಎಲ್ನಿಂದ ಹೊರಗುಳಿದು ಆಸ್ಟ್ರೇಲಿಯಾ ತಂಡದ ಪರ ಹೆಚ್ಚಿನ ಸಮಯ ಆಡಲು ಬಯಸುತ್ತೇನೆ ಎಂದು ಸ್ಟಾರ್ಕ್ ತಿಳಿಸಿದ್ದಾರೆ.

ಮಿಚೆಲ್ ಸ್ಟಾರ್ಕ್ ಐಪಿಎಲ್‌ನಲ್ಲಿ ಇದುವರೆಗೆ 27 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 7.17 ರ ಆರ್ಥಿಕ ದರದಲ್ಲಿ ಒಟ್ಟು 34 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಬ್ಯಾಟಿಂಗ್ ಮೂಲಕ ಕೂಡ ಒಟ್ಟು 96 ರನ್‌ಗಳನ್ನು ರನ್ ಕಲೆಹಾಕಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾ ಪರ 48 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 7.52 ರ ಆರ್ಥಿಕ ದರದಲ್ಲಿ ಒಟ್ಟು 60 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ ಕಳೆದ ಬಾರಿ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಸ್ಟಾರ್ಕ್ ಅವರ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದ್ದರು.