
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜಿಗಾಗಿ ಎಲ್ಲಾ ತಂಡಗಳು ತಯಾರಿಗಳನ್ನು ಆರಂಭಿಸಿದೆ. ಈಗಾಗಲೇ ಪ್ರತಿ ಫ್ರಾಂಚೈಸಿಗಳು ಆಟಗಾರರ ಖರೀದಿಗಾಗಿ ರೂಪುರೇಷೆಗಳನ್ನು ಸಿದ್ದಪಡಿಸುತ್ತಿದ್ದು, ಅದರಂತೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡವು ದೇಶೀಯ ಪ್ರತಿಭೆಯೊಬ್ಬರಿಗೆ ಬುಲಾವ್ ನೀಡಿದೆ.

ಹೌದು, ಒಡಿಶಾ ತಂಡದ ನಾಯಕ ಸುಭ್ರಾಂಶು ಸೇನಾಪತಿ ಅವರನ್ನು ಸಿಎಸ್ಕೆ ತಂಡವು ಟ್ರಯಲ್ಗೆ ಕರೆದಿದೆ. ಒಂದು ವೇಳೆ ಟ್ರಯಲ್ನಲ್ಲಿ ತಮ್ಮ ಸಾಮರ್ಥ್ಯವನ್ನು ಸುಭ್ರಾಂಶು ಸೇನಾಪತಿ ಸಾಬೀತುಪಡಿಸಿದರೆ, ಯುವ ಆಟಗಾರನ ಖರೀದಿಗೆ ಸಿಎಸ್ಕೆ ಭರ್ಜರಿ ಪೈಪೋಟಿ ನಡೆಸಲಿದೆ.

ಈ ವರ್ಷ ವಿಜಯ್ ಹಜಾರೆ ಟ್ರೋಫಿಯಲ್ಲಿ ಸುಭ್ರಾಂಶು ಸೇನಾಪತಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 5 ಪಂದ್ಯಗಳಲ್ಲಿ 1 ಶತಕ ಮತ್ತು 2 ಅರ್ಧ ಶತಕಗಳೊಂದಿಗೆ 275 ರನ್ ಬಾರಿಸಿದ್ದರು. ಹಾಗೆಯೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ 5 ಪಂದ್ಯಗಳಿಂದ 138 ರನ್ ಕಲೆಹಾಕಿದ್ದರು.

ಇನ್ನು ಒಡಿಶಾ ಪರ 26 ಪಂದ್ಯಗಳನ್ನು ಆಡಿರುವ ಸುಭ್ರಾಂಶು ಸೇನಾಪತಿ 24 ಸಿಕ್ಸರ್ ಮತ್ತು 50 ಬೌಂಡರಿಗಳನ್ನು ಒಳಗೊಂಡಂತೆ 637 ರನ್ ಗಳಿಸಿದ್ದಾರೆ. ಇದೀಗ ಯುವ ಆಟಗಾರನ ಭರ್ಜರಿ ಬ್ಯಾಟಿಂಗ್ ಅನ್ನು ಗಮನಿಸಿರುವ ಸಿಎಸ್ಕೆ ತಂಡವು ಟ್ರಯಲ್ಗೆ ಕರೆದಿದೆ.

ಹೀಗಾಗಿ ಮುಂದಿನ ಮೆಗಾ ಹರಾಜಿನಲ್ಲಿ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸುಭ್ರಾಂಶು ಸೇನಾಪತಿ ಹೆಸರು ಕಾಣಿಸಿಕೊಳ್ಳುವುದು ಖಚಿತ ಎಂದೇ ಹೇಳಬಹುದು. ಇತ್ತ ಸಿಎಸ್ಕೆ ತಂಡವು ಟ್ರಯಲ್ಗೆ ಕರೆದಿರುವ ಕಾರಣ ಇತರೆ ತಂಡಗಳು ಕೂಡ ಯುವ ಆಟಗಾರನ ಖರೀದಿಗೆ ಆಸಕ್ತಿ ತೋರಲಿದೆ.