
ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಆವೃತ್ತಿಗೆ ತಯಾರಿ ಶುರುವಾಗಿದೆ. ಅದಕ್ಕೂ ಮುನ್ನ ಪ್ರಸ್ತುತ ಇರುವ 8 ಫ್ರಾಂಚೈಸಿಗಳು ರಿಟೈನ್ ಆಟಗಾರರ ಪಟ್ಟಿಯನ್ನು ಪ್ರಕಟಿಸಬೇಕಿದೆ. ನವೆಂಬರ್ 30 ರೊಳಗೆ ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಿದ್ದು, ಹೀಗಾಗಿ ಎಲ್ಲಾ ಫ್ರಾಂಚೈಸಿಗಳು ರಿಟೆನ್ಶನ್ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ.

ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯಾರನ್ನು ಉಳಿಸಿಕೊಳ್ಳಲಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ತಂಡದಲ್ಲಿದ್ದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಕೆಲ ದಿನಗಳ ಹಿಂದೆಯಷ್ಟೇ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಹಾಗಾಗಿ ಅವರು ಈ ಬಾರಿ ಆರ್ಸಿಬಿ ಪರ ಕಣಕ್ಕಿಳಿಯುವುದಿಲ್ಲ.

ಹೀಗಾಗಿ ಆರ್ಸಿಬಿ ಈ ಬಾರಿ ರಿಟೆನ್ಶನ್ ಪ್ರಕ್ರಿಯೆಯಲ್ಲಿ 3+1 ಸೂತ್ರದ ಮೊರೆ ಹೋಗಲಿದೆ. ಅಂದರೆ ಮೂವರು ಭಾರತೀಯ ಆಟಗಾರರು+ 1 ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಲಿದೆ. ಅದರಂತೆ ಆರ್ಸಿಬಿಯ ಮೊದಲ ಆಯ್ಕೆ ವಿರಾಟ್ ಕೊಹ್ಲಿ. ತಂಡದ ಬ್ರಾಂಡ್ ಆಗಿ ಕೊಹ್ಲಿಯನ್ನು ರಿಟೈನ್ ಮಾಡಿಕೊಳ್ಳಲಿದ್ದು, ಹೀಗಾಗಿ ಅವರಿಗೆ 16 ಕೋಟಿ ರೂ. ಪಾವತಿಸಲಿದೆ.

ಇನ್ನು 2ನೇ ಆಟಗಾರನಾಗಿ ಯುಜುವೇಂದ್ರ ಚಹಲ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಚಹಲ್ ಐಪಿಎಲ್ನ ಬೆಸ್ಟ್ ಸ್ಪಿನ್ನರ್ಗಳಲ್ಲಿ ಒಬ್ಬರು. ಒಂದು ವೇಳೆ ಚಹಲ್ ಅವರನ್ನು ಬಿಡುಗಡೆ ಮಾಡಿದರೆ, ಮತ್ತೆ ಖರೀದಿಸಲು ಭರ್ಜರಿ ಪೈಪೋಟಿ ಕಂಡು ಬರಲಿದೆ. ಹೀಗಾಗಿ ಚಹಲ್ ಅವರನ್ನು ಬಿಡುಗಡೆ ಮಾಡುವುದಿಲ್ಲ ಎಂದೇ ಹೇಳಬಹುದು.

ಹಾಗೆಯೇ 3ನೇ ಆಟಗಾರನಾಗಿ ವೇಗಿಯನ್ನು ಉಳಿಸಿಕೊಳ್ಳಲಿದೆ. ಈ ಪಟ್ಟಿಯಲ್ಲಿ ಹರ್ಷಲ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ಹೆಸರುಗಳು ಮುಂಚೂಣಿಯಲ್ಲಿದೆ. ಆದರೆ ಕಳೆದ ಸೀಸನ್ನಲ್ಲಿ 32 ವಿಕೆಟ್ ಉರುಳಿಸಿ ಮಿಂಚಿರುವ ಹರ್ಷಲ್ ಪಟೇಲ್ ಅವರೇ ಆರ್ಸಿಬಿಯ ಮೊದಲ ಆಯ್ಕೆಯಾಗಲಿದೆ. ಹೀಗಾಗಿ ಹರ್ಷಲ್ ಪಟೇಲ್ ಅವರನ್ನೂ ಸಹ ಆರ್ಸಿಬಿ ರಿಟೈನ್ ಮಾಡಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.

ಇವರಲ್ಲದೆ, ವಿದೇಶಿ ಆಟಗಾರನ ಕೋಟಾದಲ್ಲಿ ಆರ್ಸಿಬಿ ಕಳೆದ ಸೀಸನ್ನಲ್ಲಿನ ಬೆಸ್ಟ್ ಫರ್ಫಾಮರ್ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಉಳಿಸಿಕೊಳ್ಳಲಿದೆ. ಏಕೆಂದರೆ ಕಳೆದ ಬಾರಿ ಆರ್ಸಿಬಿ 14.25 ಕೋಟಿ ನೀಡಿ ಮ್ಯಾಕ್ಸ್ವೆಲ್ ಅವರನ್ನು ಖರೀದಿಸಿದ್ದತ್ತು. ಈ ಬಾರಿ ಮತ್ತೆ ಬಿಡುಗಡೆ ಮಾಡಿದರೆ, ಮ್ಯಾಕ್ಸಿಯ ಖರೀದಿಗೆ ಮತ್ತೆ ಪೈಪೋಟಿ ನಡೆಸಬೇಕಾಗುತ್ತದೆ. ಹೀಗಾಗಿ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನೂ ಕೂಡ ಆರ್ಸಿಬಿ ರಿಟೈನ್ ಮಾಡಿಕೊಳ್ಳಲಿದೆ ಎಂದೇ ಹೇಳಬಹುದು.