- Kannada News Photo gallery Cricket photos IPL 2022 Retention: this is the first time that Glenn Maxwell has been retained
IPL 2022 Retention: 9 ವರ್ಷಗಳಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಮೇಲೆ ನಂಬಿಕೆ ಇರಿಸಿಕೊಂಡಿದ್ದು RCB ಮಾತ್ರ..!
Glenn Maxwell: ಆರ್ಸಿಬಿ ಮೊದಲ ಆಯ್ಕೆಯಾಗಿ ವಿರಾಟ್ ಕೊಹ್ಲಿಯನ್ನು 15 ಕೋಟಿ ನೀಡಿ ಉಳಿಸಿಕೊಂಡರೆ, 2ನೇ ಆಯ್ಕೆಯಾಗಿ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು 11 ಕೋಟಿಗೂ ರಿಟೈನ್ ಮಾಡಿಕೊಂಡಿದೆ. ಇನ್ನು 7 ಕೋಟಿಗೆ ಮೊಹಮ್ಮದ್ ಸಿರಾಜ್ ಅವರನ್ನು ಆರ್ಸಿಬಿ ಉಳಿಸಿಕೊಂಡಿದೆ.
Updated on: Dec 02, 2021 | 3:57 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜಿನ ಸಿದ್ದತೆಗಳು ಶುರುವಾಗಿದೆ. ಈಗಾಗಲೇ ಹಳೆಯ 8 ಫ್ರಾಂಚೈಸಿಗಳು 27 ಆಟಗಾರರನ್ನು ಉಳಿಸಿಕೊಂಡಿದೆ. ಈ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂವರು ಆಟಗಾರರನ್ನು ಉಳಿಸಿಕೊಂಡಿರುವುದು ವಿಶೇಷ.

ಆರ್ಸಿಬಿ ಮೊದಲ ಆಯ್ಕೆಯಾಗಿ ವಿರಾಟ್ ಕೊಹ್ಲಿಯನ್ನು 15 ಕೋಟಿ ನೀಡಿ ಉಳಿಸಿಕೊಂಡರೆ, 2ನೇ ಆಯ್ಕೆಯಾಗಿ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು 11 ಕೋಟಿಗೂ ರಿಟೈನ್ ಮಾಡಿಕೊಂಡಿದೆ. ಇನ್ನು 7 ಕೋಟಿಗೆ ಮೊಹಮ್ಮದ್ ಸಿರಾಜ್ ಅವರನ್ನು ಆರ್ಸಿಬಿ ಉಳಿಸಿಕೊಂಡಿದೆ.

ಕಳೆದ ಸೀಸನ್ನಲ್ಲಿ 14.25 ಕೋಟಿ ಪಡೆದಿದ್ದ ಮ್ಯಾಕ್ಸ್ವೆಲ್ ಅವರ ಸಂಭಾವನೆ ಈ ಬಾರಿ ಕಡಿತಗೊಂಡಿದೆ. ಆದರೆ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗ್ಲೆನ್ ಮ್ಯಾಕ್ಸ್ವೆಲ್ ರಿಟೈನ್ ಆಗಿರುವುದು ವಿಶೇಷ. ಅಂದರೆ ಮ್ಯಾಕ್ಸಿ 2013 ರಿಂದ ಐಪಿಎಲ್ ಆಡುತ್ತಿದ್ದಾರೆ. ಈ ನಡುವೆ 9 ಸೀಸನ್ ಆಡಿದ್ದಾರೆ.

ಆದರೆ ಇದುವರೆಗೆ ಅವರನ್ನು ಯಾವುದೇ ಫ್ರಾಂಚೈಸಿ ರಿಟೈನ್ ಮಾಡಿಕೊಂಡಿರಲಿಲ್ಲ ಎಂಬುದು ವಿಶೇಷ. 2013 ರಲ್ಲಿ ಮುಂಬೈ ಇಂಡಿಯನ್ಸ್ ಪರ 5.30 ಕೋಟಿಗೆ ಆಡಿದ್ದ ಮ್ಯಾಕ್ಸ್ವೆಲ್, 2014 ರಲ್ಲಿ 6 ಕೋಟಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್) ತಂಡದ ಪಾಲಾಗಿದ್ದರು.

ಮೂರು ವರ್ಷಗಳ ಕಾಲ ಪಂಜಾಬ್ ತಂಡದಲ್ಲೇ ಉಳಿದಿದ್ದರೂ, 2017 ರ ಬಳಿಕ ಪಂಜಾಬ್ ತಂಡವು ಬಿಡುಗಡೆ ಮಾಡಿತ್ತು. ಇದಾದ ಬಳಿಕ 2018 ರಲ್ಲಿ 9 ಕೋಟಿಗೆ ಡೆಲ್ಲಿ ಡೇರ್ ಡೇವಿಲ್ಸ್ (ಡೆಲ್ಲಿ ಕ್ಯಾಪಿಟಲ್ಸ್) ಪರ ಆಡಿದ್ದರು.

ಇನ್ನು 2020 ರಲ್ಲಿ 10.75 ಕೋಟಿಗೆ ಮತ್ತೆ ಪಂಜಾಬ್ ಕಿಂಗ್ಸ್ ತಂಡವು ಮ್ಯಾಕ್ಸ್ವೆಲ್ ಅವರನ್ನು ಖರೀದಿಸಿತ್ತು. ಆದರೆ ಮರು ವರ್ಷವೇ ಬಿಡುಗಡೆ ಮಾಡಲಾಯಿತು. ಇದರ ಬೆನ್ನಲ್ಲೇ 2021 ರಲ್ಲಿ 14.25 ಕೋಟಿಗೆ ಆರ್ಸಿಬಿ ಪಾಲಾಗಿದ್ದರು.

ಇದೀಗ ಕಳೆದ 9 ಸೀಸನ್ ಐಪಿಎಲ್ನಲ್ಲಿ ಮೊದಲ ಬಾರಿಗೆ ಮೆಗಾ ಹರಾಜಿಗೂ ಮುನ್ನ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ತಂಡವೊಂದು ರಿಟೈನ್ ಮಾಡಿಕೊಂಡಿದೆ. ಅದು ಕೂಡ ಕಡಿಮೆ ಮೊತ್ತದ ಸಂಭಾವನೆಯೊಂದಿಗೆ ಎಂಬುದು ವಿಶೇಷ.
