
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಮುಂದಿನ ಸೀಸನ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ರಿಟೈನ್ ಪಟ್ಟಿಯನ್ನು ಸಿದ್ಧಪಡಿಸಿದ್ದು, ಅದರಲ್ಲಿ ಅಯ್ಯರ್ ಹೆಸರಿಲ್ಲ ಎಂಬುದು ಖಚಿತವಾಗಿದೆ. ಇದಾಗ್ಯೂ ಶ್ರೇಯಸ್ ಅಯ್ಯರ್ ಹೊಸ ಫ್ರಾಂಚೈಸಿಗಳಿಗೆ ನೇರ ಆಯ್ಕೆಯಾಗದಿರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಐಪಿಎಲ್ ರಿಟೆನ್ಶನ್ ನಿಯಮದ ಪ್ರಕಾರ ಹಳೆಯ ಫ್ರಾಂಚೈಸಿಗೆ ಗರಿಷ್ಠ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಬಹುದು. ಹಾಗೆಯೇ ಹೊಸ ಎರಡು ಫ್ರಾಂಚೈಸಿ ಮೆಗಾ ಹರಾಜಿನಲ್ಲಿ ಹೆಸರು ನೋಂದಣಿ ಮಾಡಿಕೊಂಡ ಮೂವರು ಆಟಗಾರರನ್ನು ನೇರವಾಗಿ ಆಯ್ಕೆ ಮಾಡಬಹುದು.

ಆದರೆ ಇಲ್ಲಿ ಶ್ರೇಯಸ್ ಅಯ್ಯರ್ ಹೊಸ ಎರಡು ಫ್ರಾಂಚೈಸಿಗಳಾದ ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿ ಜೊತೆ ಒಪ್ಪಂದಕ್ಕೆ ಮುಂದಾಗಿಲ್ಲ. ಅಷ್ಟೇ ಅಲ್ಲದೆ ನೇರವಾಗಿ ಆಯ್ಕೆಯಾಗದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಮೆಗಾ ಹರಾಜಿನಲ್ಲಿ ಅದೃಷ್ಟ ಪರೀಕ್ಷೆ ನಡೆಸಲು ಶ್ರೇಯಸ್ ಅಯ್ಯರ್ ಬಯಸಿದ್ದಾರೆ.

ಏಕೆಂದರೆ ಶ್ರೇಯಸ್ ಅಯ್ಯರ್ ಐಪಿಎಲ್ನ ಉತ್ತಮ ನಾಯಕರಲ್ಲಿ ಒಬ್ಬರು. 2018 ರಲ್ಲಿ ಡೆಲ್ಲಿ ತಂಡದ ನಾಯಕತ್ವ ವಹಿಸಿದ್ದ ಅಯ್ಯರ್ 2019 ರಲ್ಲಿ ತಂಡವನ್ನು ಪ್ಲೇಆಫ್ಗೆ ಕೊಂಡೊಯ್ದಿದ್ದರು. ಅಷ್ಟೇ ಅಲ್ಲದೆ 2020 ರಲ್ಲಿ ತಂಡವನ್ನು ಫೈನಲ್ ತಲುಪಿಸಿದ್ದರು. ಇದೀಗ ಬಹುತೇಕ ತಂಡಗಳು ನಾಯಕನ ಆಯ್ಕೆ ಮಾಡಬೇಕಿದೆ.

ಅದರಲ್ಲೂ ಆರ್ಸಿಬಿ ಕೂಡ ಹೊಸ ನಾಯಕನ ಹುಡುಕಾಟದಲ್ಲಿದೆ. ಇಲ್ಲಿ ಅಯ್ಯರ್ ಹೊಸ ಫ್ರಾಂಚೈಸಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳದ ಕಾರಣ ನೇರವಾಗಿ ಆರ್ಸಿಬಿ ತಂಡಕ್ಕೂ ಖರೀದಿಸುವ ಅವಕಾಶ ದೊರೆಯಲಿದೆ. ಅಂದರೆ ಉತ್ತಮ ನಾಯಕನ ಹುಡುಕಾಟದಲ್ಲಿರುವ ಆರ್ಸಿಬಿ ಬಿಡ್ಡಿಂಗ್ ಮೂಲಕ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಲು ಅವಕಾಶ ಸಿಗಲಿದೆ.

ಇತ್ತ ಶ್ರೇಯಸ್ ಅಯ್ಯರ್ ಕೂಡ ದೊಡ್ಡ ಮೊತ್ತದ ನಿರೀಕ್ಷೆಯೊಂದಿಗೆ ಮೆಗಾ ಹರಾಜಿನಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಯ್ಯರ್ಗೆ ಈ ಹಿಂದೆ 7 ಕೋಟಿ ನೀಡಿದ್ದು, ಅದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಹರಾಜಿನಲ್ಲಿ ಪಡೆಯುವ ವಿಶ್ವಾಸದಲ್ಲಿದ್ದಾರೆ ಶ್ರೇಯಸ್ ಅಯ್ಯರ್. ಒಟ್ಟಿನಲ್ಲಿ ನಾಯಕನ ಹುಡುಕಾಟದಲ್ಲಿರುವ ಫ್ರಾಂಚೈಸಿಗಳಿಗೆ ಶ್ರೇಯಸ್ ಅಯ್ಯರ್ ಮೊದಲ ಟಾರ್ಗೆಟ್ ಆಗುವುದರಲ್ಲಿ ಯಾವುದೇ ಅನುಮಾವಿಲ್ಲ ಎಂದೇ ಹೇಳಬಹುದು. ಅದರಂತೆ ಅಯ್ಯರ್ ಆರ್ಸಿಬಿ ಸಿಗಲಿದೆಯಾ ಕಾದು ನೋಡಬೇಕಿದೆ.