Updated on: Dec 20, 2021 | 7:58 PM
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಶುರುವಾಗಿ ಬರೋಬ್ಬರಿ 16 ವರ್ಷಗಳು ಕಳೆದಿವೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಐಪಿಎಲ್ನಲ್ಲಿ ಅನೇಕ ಆಟಗಾರರು ಬಂದು ಹೋಗಿದ್ದಾರೆ. 8 ತಂಡಗಳಿಂದ ಶುರುವಾದ ಲೀಗ್ ಆ ಬಳಿಕ 10 ತಂಡಗಳ ನಡುವಣ ಕದನವಾಗಿ ಮಾರ್ಪಟ್ಟಿತ್ತು. ವಿಶೇಷ ಎಂದರೆ ಹೀಗೆ ಕಳೆದ 16 ಸೀಸನ್ನಲ್ಲಿ 10 ತಂಡಗಳಲ್ಲಿ ಒಂದು ತಂಡವು 15 ಬಾರಿ ನಾಯಕನನ್ನು ಬದಲಿಸಿದೆ ಎಂದರೆ ನಂಬುತ್ತೀರಾ? ನಂಬಲೇಬೇಕು...ಏಕೆಂದರೆ ಇದು ಕೂಡ ಐಪಿಎಲ್ ಇತಿಹಾಸದ ಒಂದು ದಾಖಲೆಯಾಗಿದೆ.
ಹೌದು, ಪಂಜಾಬ್ ಕಿಂಗ್ಸ್ (ಕಿಂಗ್ಸ್ ಇಲೆವೆನ್ ಪಂಜಾಬ್) ತಂಡವನ್ನು ಇದುವರೆಗೆ 15 ನಾಯಕರುಗಳು ಮುನ್ನಡೆಸಿದ್ದಾರೆ. ಇದಾಗ್ಯೂ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ ಎಂಬುದೇ ಅಚ್ಚರಿ. ಹಾಗಿದ್ರೆ ಪಂಜಾಬ್ ತಂಡವನ್ನು ಮುನ್ನಡೆಸಿದ ಕ್ಯಾಪ್ಟನ್ಗಳು ಯಾರೆಲ್ಲಾ ನೋಡೋಣ...
1- ಯುವರಾಜ್ ಸಿಂಗ್: ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್) ತಂಡದ ಮೊದಲ ನಾಯಕ ಯುವರಾಜ್ ಸಿಂಗ್. ಯುವಿ 2008 ಮತ್ತು 2009 ರ ಸೀಸನ್ಗಳಲ್ಲಿ ತಂಡದ ನಾಯಕರಾಗಿದ್ದರು. ಯುವರಾಜ್ ಸಿಂಗ್ ನಾಯಕತ್ವದಲ್ಲಿ ಪಂಜಾಬ್ 29 ಪಂದ್ಯಗಳನ್ನು ಆಡಿದೆ. ಅದರಲ್ಲಿ 17 ಪಂದ್ಯ ಗೆದ್ದು, 12 ರಲ್ಲಿ ಸೋತಿದೆ.
2- ಕುಮಾರ ಸಂಗಕ್ಕಾರ: ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ಪಂಜಾಬ್ ಕಿಂಗ್ಸ್ ತಂಡದ ಎರಡನೇ ನಾಯಕರಾಗಿದ್ದರು. ಐಪಿಎಲ್ 2010 ರಲ್ಲಿ ಪಂಜಾಬ್ ತಂಡವನ್ನು 13 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಈ ವೇಳೆ ಗೆದ್ದಿರೋದು ಕೇವಲ 3 ಪಂದ್ಯಗಳಲ್ಲಿ ಮಾತ್ರ.
3- ಮಹೇಲಾ ಜಯವರ್ಧನೆ: 2010 ರಲ್ಲಿ ಸಂಗಾಕ್ಕರ ನಾಯಕತ್ವದಲ್ಲಿ ಸತತ ಸೋಲಿನಿಂದ ಕಂಗೆಟ್ಟ ಪಂಜಾಬ್ ಫ್ರಾಂಚೈಸಿಯು ಶ್ರೀಲಂಕಾದ ಮತ್ತೋರ್ವ ಆಟಗಾರ ಮಹೇಲಾ ಜಯವರ್ಧನೆ ನಾಯಕತ್ವ ನೀಡಿತು. ಹೀಗೆ ಒಂದು ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ ಜಯವರ್ಧನೆ ಕೂಡ ಗೆಲುವಿನ ರುಚಿ ನೋಡಿಲ್ಲ.
4- ಆ್ಯಡಮ್ ಗಿಲ್‌ಕ್ರಿಸ್ಟ್: ಪಂಜಾಬ್ ತಂಡದ ನಾಲ್ಕನೇ ಕ್ಯಾಪ್ಟನ್ ಆಗಿ ಆ್ಯಡಮ್ ಗಿಲ್‌ಕ್ರಿಸ್ಟ್ ಕಾಣಿಸಿಕೊಂಡಿದ್ದರು. ಐಪಿಎಲ್ 2011 ರಿಂದ 2013 ರವರೆಗೆ ತಂಡದ ನಾಯಕರಾಗಿದ್ದರು. ಈ ವೇಳೆ ಪಂಜಾಬ್ ತಂಡವನ್ನು 34 ಪಂದ್ಯಗಳಲ್ಲಿ ಮುನ್ನಡೆಸಿದ್ದ ಗಿಲ್‌ಕ್ರಿಸ್ಟ್ 17 ರಲ್ಲಿ ಜಯ ತಂದುಕೊಟ್ಟಿದ್ದರು.
5- ಡೇವಿಡ್ ಹಸ್ಸಿ: ಗಿಲ್‌ಕ್ರಿಸ್ಟ್ ಅಲಭ್ಯತೆಯ ನಡುವೆ 2012 ಹಾಗೂ 2013 ರಲ್ಲಿ ಆಸ್ಟ್ರೇಲಿಯಾ ಆಟಗಾರ ಡೇವಿಡ್ ಹಸ್ಸಿ ಪಂಜಾಬ್ ತಂಡವನ್ನು 12 ಪಂದ್ಯಗಳಲ್ಲಿ ಮುನ್ನಡೆಸಿದ್ದರು.
6- ಜಾರ್ಜ್ ಬೈಲಿ: ಪಂಜಾಬ್ ಕಿಂಗ್ಸ್ ತಂಡ 6ನೇ ನಾಯಕನಾಗಿ ಆಸ್ಟ್ರೇಲಿಯಾದ ಜಾರ್ಜ್ ಬೈಲಿ ಕಾಣಿಸಿಕೊಂಡಿದ್ದರು. ಐಪಿಎಲ್ 2014 ಮತ್ತು 2015 ರಲ್ಲಿ ತಂಡವನ್ನು 35 ಪಂದ್ಯಗಳಲ್ಲಿ ಮುನ್ನಡೆಸಿದ ಬೈಲಿ 18 ಗೆಲುವು ತಂದುಕೊಟ್ಟಿದ್ದರು. ಅಷ್ಟೇ ಅಲ್ಲದೆ ಜಾರ್ಜ್ ಬೈಲಿ ಅವರ ನಾಯಕತ್ವದಲ್ಲಿ ಪಂಜಾಬ್ IPL 2014 ರಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿತು.
7- ವೀರೇಂದ್ರ ಸೆಹ್ವಾಗ್: ಐಪಿಎಲ್ 2015 ರಲ್ಲಿ ಜಾರ್ಜ್ ಬೈಲಿ ಅವರ ಅನುಪಸ್ಥಿತಿಯಲ್ಲಿ ವೀರೇಂದ್ರ ಸೆಹ್ವಾಗ್ ಕೂಡ ನಾಯಕರಾಗಿ ಕಾಣಿಸಿಕೊಂಡಿದ್ದರು.
8- ಡೇವಿಡ್ ಮಿಲ್ಲರ್: ಐಪಿಎಲ್ 2016 ರಲ್ಲಿ ಪಂಜಾಬ್ ತಂಡದ ನಾಯಕನಾಗಿ ಡೇವಿಡ್ ಮಿಲ್ಲರ್ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ 6 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ಕೇವಲ 1 ಗೆಲುವು ಮಾತ್ರ ಸಾಧಿಸಿದ್ದರಿಂದ ಅರ್ಧದಲ್ಲೇ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು.
9- ಮುರಳಿ ವಿಜಯ್: ಡೇವಿಡ್ ಮಿಲ್ಲರ್ ಅವರನ್ನು ನಾಯಕತ್ವದಿಂದ ಕೆಳಗಿಸಿ ಮುರಳಿ ವಿಜಯ್ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಲಾಗಿತ್ತು. ಎಂಟು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಮುರಳಿ ವಿಜಯ್ ತಂಡಕ್ಕೆ ಮೂರು ಗೆಲುವು ತಂದುಕೊಟ್ಟಿದ್ದರು.
10- ಗ್ಲೆನ್ ಮ್ಯಾಕ್ಸ್‌ವೆಲ್: ಐಪಿಎಲ್ 2017 ರಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. 14 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಮ್ಯಾಕ್ಸ್‌ವೆಲ್ ಪಂಜಾಬ್ಗೆ 7 ಜಯ ತಂದುಕೊಟ್ಟಿದ್ದರು.
11- ಆರ್. ಅಶ್ವಿನ್: ಐಪಿಎಲ್ 2018 ರಲ್ಲಿ ರವಿಚಂದ್ರನ್ ಅಶ್ವಿನ್ ತಂಡದ ನಾಯಕರಾಗಿದ್ದರು. ಅಶ್ವಿನ್ ನಾಯಕತ್ವದಲ್ಲಿ 2 ಸೀಸನ್ ಆಡಿದ್ದ ಪಂಜಾಬ್ ತಂಡವು 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, 16 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ.
12- ಕೆಎಲ್ ರಾಹುಲ್: ಐಪಿಎಲ್ 2020 ರಲ್ಲಿ ಪಂಜಾಬ್ ತಂಡವು ಕೆಎಲ್ ರಾಹುಲ್ ಅವರನ್ನು ನಾಯಕನಾಗಿ ನೇಮಿಸಿತು. ಪಂಜಾಬ್ ಕಿಂಗ್ಸ್ ತಂಡವನ್ನು ರಾಹುಲ್ 2 ಸೀಸನ್ನಲ್ಲಿ 27 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಇದರಲ್ಲಿ ಗೆದ್ದಿರೋದು 11 ಪಂದ್ಯಗಳನ್ನು. ಹಾಗೆಯೇ ರಾಹುಲ್ ಕ್ಯಾಪ್ಟನ್ಸಿಯಲ್ಲಿ ಪಂಜಾಬ್ 14 ಪಂದ್ಯಗಳಲ್ಲಿ ಸೋತಿದೆ.
13: ಮಯಾಂಕ್ ಅಗರ್ವಾಲ್: ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ನೂತನ ನಾಯಕರಾಗಿ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದರು. ಅದರಂತೆ ಮಯಾಂಕ್ ನಾಯಕತ್ವದಲ್ಲಿ 14 ಪಂದ್ಯಗಳನ್ನಾಡಿದ್ದ ಪಂಜಾಬ್ 7 ಸೋಲು, 7 ಗೆಲುವು ಕಂಡಿದ್ದವು.
ಇದೀಗ ಪಂಜಾಬ್ ಕಿಂಗ್ಸ್ ತಂಡವು ಹೊಸ ನಾಯಕನ ಹುಡುಕಾಟದಲ್ಲಿದೆ. ಈ ಬಾರಿ ಹೊಸ ನಾಯಕ ಆಯ್ಕೆಯಾದರೆ ಐಪಿಎಲ್ನ 15 ಸೀಸನ್ನಲ್ಲಿ 14 ನಾಯಕರನ್ನು ಆಯ್ಕೆ ಮಾಡಿದ ತಂಡ ಎಂಬ ಖ್ಯಾತಿ ಪಂಜಾಬ್ ಕಿಂಗ್ಸ್ ಪಾಲಾಗಲಿದೆ.