IPL 2023: RCB ಪಾಲಿಗೆ ಕಂಟಕವಾಗುತ್ತಿರುವ ಇಂಪ್ಯಾಕ್ಟ್ ಪ್ಲೇಯರ್ಸ್..!
IPL 2023 RCB Kannada:
Updated on: Apr 16, 2023 | 10:07 PM

IPL 2023: ಇಂಪ್ಯಾಕ್ಟ್ ಪ್ಲೇಯರ್ಸ್...ಸರಳವಾಗಿ ಹೇಳಬೇಕೆಂದರೆ ಇಡೀ ಪಂದ್ಯದ ಚಿತ್ರಣ ಬದಲಿಸಬಲ್ಲ ಆಟಗಾರರು. ಆದರೆ ಆರ್ಸಿಬಿ ಪರ ಕಣಕ್ಕಿಳಿಯುತ್ತಿರುವ ಇಂಪ್ಯಾಕ್ಟ್ ಪ್ಲೇಯರ್ಗಳು ಮಾತ್ರ ಇದಕ್ಕೆ ತದ್ವಿರುದ್ಧ. ಇದಕ್ಕೆ ಸಾಕ್ಷಿಯೇ ಆರ್ಸಿಬಿ ಕಣಕ್ಕಿಳಿಸಿದ ಮೂರು ಇಂಪ್ಯಾಕ್ಟ್ ಸಬ್ಗಳ ಪ್ರದರ್ಶನ.

ಆರ್ಸಿಬಿ ಪರ ಮೊದಲ ಬಾರಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಆಟಗಾರ ಅನೂಜ್ ರಾವತ್. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಅವಕಾಶ ಪಡೆದ ಅನೂಜ್ ಕಲೆಹಾಕಿದ್ದು 5 ಎಸೆತಗಳಲ್ಲಿ ಕೇವಲ 1 ರನ್.

ಇದಾದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಸ್ಪಿನ್ನರ್ ಕರ್ಣ್ ಶರ್ಮಾರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಿತ್ತು. ಇಂಪ್ಯಾಕ್ಟ್ ಮಾಡಲೆಂದು ಬಂದ ಕರ್ಣ್ ಶರ್ಮಾ 3 ಓವರ್ಗಳಲ್ಲಿ 38 ರನ್ ನೀಡಿ ಲಕ್ನೋ ತಂಡದ ಗೆಲುವಿಗೆ ಕೊಡುಗೆ ನೀಡಿದರು ಎನ್ನಬಹುದು.

ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಮತ್ತೆ ಅನೂಜ್ ರಾವತ್ಗೆ ಅವಕಾಶ ನೀಡಿತ್ತು. 15ನೇ ಓವರ್ ವೇಳೆ ಕಣಕ್ಕಿಳಿದಿದ್ದ ರಾವತ್ ಬರೋಬ್ಬರಿ 22 ಎಸೆತಗಳನ್ನು ಎದುರಿಸಿದ್ದರು. ಅಲ್ಲದೆ ಕಲೆಹಾಕಿದ್ದು ಕೇವಲ 15 ರನ್ ಮಾತ್ರ. ಅಂದರೆ ಇಂಪ್ಯಾಕ್ಟ್ ಮಾಡಲೆಂದು ಬಂದ ಅನೂಜ್ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ರನ್ಗಳಿಕೆ ಕುಂಠಿತವಾಗಲು ಪ್ರಮುಖ ಕಾರಣರಾಗಿದ್ದರು.

ಅಂದರೆ ಆರ್ಸಿಬಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸುತ್ತಿರುವ ಆಟಗಾರರೇ ಆರ್ಸಿಬಿ ಪಾಲಿಗೆ ಮುಳುವಾಗುತ್ತಿದ್ದಾರೆ. ಅದರಲ್ಲೂ ಅನೂಜ್ ರಾವತ್ ವಿಫಲರಾಗುತ್ತಿದ್ದರೂ ಅವರಿಗೆ ಸತತ ಅವಕಾಶ ನೀಡುತ್ತಿರುವ ಬಗ್ಗೆ ಆಕ್ರೋಶಗಳು ವ್ಯಕ್ತವಾಗುತ್ತಿದೆ.

ಒಟ್ಟಿನಲ್ಲಿ ಎಲ್ಲಾ ತಂಡಗಳು ಇಂಪ್ಯಾಕ್ಟ್ ಪ್ಲೇಯರ್ ಮೂಲಕ ಪಂದ್ಯಗಳನ್ನು ಗೆಲ್ಲುತ್ತಿದ್ದರೆ, ಆರ್ಸಿಬಿ ಇಂಪ್ಯಾಕ್ಟ್ ಪ್ಲೇಯರ್ಗಳು ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಆಡುತ್ತಿರುವುದೇ ಈಗ ತಂಡದ ಚಿಂತೆಯನ್ನು ಹೆಚ್ಚಿಸಿದೆ.

RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಮೈಕೆಲ್ ಬ್ರೇಸ್ವೆಲ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್.



















