
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಮಿನಿ ಹರಾಜಿಗಾಗಿ 10 ತಂಡಗಳು ಭರ್ಜರಿ ಸಿದ್ಧತೆಯಲ್ಲಿದೆ. ಈಗಾಗಲೇ ಆಟಗಾರರ ಹೆಸರು ನೋಂದಣಿಗೆ ಬಿಸಿಸಿಐ ಗಡುವು ವಿಧಿಸಿದೆ. ಅದರಂತೆ ಐಪಿಎಲ್ 2023 ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸುವ ಆಟಗಾರರು ಡಿಸೆಂಬರ್ 16 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು.

ಈಗಾಗಲೇ ಇಂಗ್ಲೆಂಡ್ ಆಟಗಾರರಾದ ಬೆನ್ ಸ್ಟೋಕ್ಸ್ ಹಾಗೂ ಜೋ ರೂಟ್ ಹೆಸರು ನೀಡಿದ್ದಾರೆ. ಇದೀಗ ಆಸ್ಟ್ರೇಲಿಯಾ ತಂಡದ ಉದಯೋನ್ಮುಖ ಯುವ ಆಲ್ರೌಂಡರ್ ಕೂಡ ಐಪಿಎಲ್ಗೆ ಹೆಸರು ನೀಡಿರುವುದನ್ನು ಖಚಿತಪಡಿಸಿದ್ದಾರೆ.

ಹೌದು, ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಆರಂಭಿಕನಾಗಿ ಕಾಣಿಸಿಕೊಂಡ ಹೊಡಿಬಡಿ ದಾಂಡಿಗ ಕ್ಯಾಮರೋನ್ ಗ್ರೀನ್ ಐಪಿಎಲ್ ಹರಾಜಿಗೆ ಹೆಸರು ನೀಡಿರುವುದಾಗಿ ತಿಳಿಸಿದ್ದಾರೆ. ನಾನು ಅತ್ಯುತ್ತಮ ಕ್ರಿಕೆಟ್ ಆಡುವುದನ್ನು ಎದುರು ನೋಡುತ್ತಿದ್ದೇನೆ. ನಮ್ಮ ಪಶ್ಚಿಮ ಆಸ್ಟ್ರೇಲಿಯಾದ ಆಟಗಾರರು ಐಪಿಎಲ್ ಬಗ್ಗೆ ಮಾತನಾಡುವುದನ್ನು ಕೇಳಿದ್ದೇನೆ. ಇದೀಗ ನಾನು ಕೂಡ ಲೀಗ್ನ ಭಾಗವಾಗುವುದನ್ನು ಎದುರು ನೋಡುತ್ತಿದ್ದೇನೆ ಎಂದು 23 ವರ್ಷದ ಕ್ಯಾಮರೋನ್ ಗ್ರೀನ್ ತಿಳಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ವಿಶ್ವದ ಅತ್ಯುತ್ತಮರು ಕಾಣಿಸಿಕೊಳ್ಳುತ್ತಾರೆ. ನನಗೆ ಅವಕಾಶ ಸಿಗುವುದರಿಂದ ನನ್ನ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬಹುದು. ನಾನು ಎಷ್ಟು ಸಾಧ್ಯವೋ ಅಷ್ಟು ಕಲಿಯಲು ಬಯಸುತ್ತೇನೆ. ಐಪಿಎಲ್ ಕಲಿಯಲು ಉತ್ತಮ ವೇದಿಕೆಗಳನ್ನು ಒಂದಾಗಿದೆ ಗ್ರೀನ್ ತಿಳಿಸಿದ್ದಾರೆ.

ಇತ್ತ ಕ್ಯಾಮರೋನ್ ಗ್ರೀನ್ ಐಪಿಎಲ್ಗೆ ಹೆಸರು ನೀಡುತ್ತಿದ್ದಂತೆ ಅತ್ತ 10 ತಂಡಗಳ ಫ್ರಾಂಚೈಸಿಗಳು ಕೂಡ ಹರಾಜಿಗಾಗಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಏಕೆಂದರೆ ಆರಂಭಿಕನಾಗಿ ಕಣಕ್ಕಿಳಿಯುವ ಗ್ರೀನ್ 140 ಕಿ.ಮೀ ವೇಗದಲ್ಲಿ ಬೌಲಿಂಗ್ ಕೂಡ ಮಾಡಬಲ್ಲರು. ಹೀಗಾಗಿ ಅತ್ಯುತ್ತಮ ಆಲ್ರೌಂಡರ್ ಖರೀದಿಗೆ ಎಲ್ಲಾ ತಂಡಗಳು ಪ್ಲ್ಯಾನ್ಗಳನ್ನು ರೂಪಿಸುತ್ತಿದೆ.

ಸೆಪ್ಟೆಂಬರ್ನಲ್ಲಿ ನಡೆದ ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಕ್ಯಾಮರೋನ್ ಗ್ರೀನ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದ್ದರು. ಅಷ್ಟೇ ಅಲ್ಲದೆ 3 ಪಂದ್ಯಗಳಲ್ಲಿ 2 ಅರ್ಧಶತಕದೊಂದಿಗೆ ಒಟ್ಟು 118 ರನ್ ಬಾರಿಸಿದ್ದರು. ಹೀಗಾಗಿ ಆಲ್ರೌಂಡರ್ ಸ್ಥಾನದಲ್ಲಿ ಕಾಣಿಸಿಕೊಳ್ಳಲಿರುವ ಕ್ಯಾಮರೋನ್ ಗ್ರೀನ್ ಖರೀದಿಗೆ ಎಲ್ಲಾ ಫ್ರಾಂಚೈಸಿಗಳು ಭರ್ಜರಿ ಪೈಪೋಟಿ ನಡೆಸಲಿದೆ.

IPL 2023 ರ ಮಿನಿ ಹರಾಜು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ. ಈ ಹರಾಜು ಪ್ರಕ್ರಿಯೆಯಲ್ಲಿ 300 ಕ್ಕೂ ಅಧಿಕ ಆಟಗಾರರ ಹೆಸರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ 10 ತಂಡಗಳಲ್ಲಿ ಖಾಲಿ ಉಳಿದಿರುವ ಸ್ಥಾನಗಳಿಗೆ ಮಾತ್ರ ಆಯ್ಕೆ ನಡೆಯಲಿದೆ. ಹೀಗಾಗಿ ಕೆಲವೇ ಕೆಲವು ಆಟಗಾರರಿಗೆ ಮಾತ್ರ ಈ ಬಾರಿ ಅವಕಾಶ ಸಿಗಲಿದೆ.