
IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಗಾಗಿ ಎಲ್ಲಾ ತಂಡಗಳು ಸಜ್ಜಾಗಿದೆ. ಈ ಬಾರಿ ನಡೆದ ಮಿನಿ ಹರಾಜಿನ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡ ಕೂಡ ಬಲಿಷ್ಠ ಬಳಗವನ್ನೇ ರೂಪಿಸಿದೆ. ಹರಾಜಿಗೂ ಮುನ್ನ 12 ಆಟಗಾರರನ್ನು ಮಾತ್ರ ಉಳಿಸಿಕೊಂಡಿದ್ದ ಎಸ್ಆರ್ಹೆಚ್ ತಂಡವು ಒಟ್ಟು 13 ಆಟಗಾರರನ್ನು ಖರೀದಿಸಿದೆ.

ಸದ್ಯ 25 ಸದಸ್ಯರ ಬಳಗವನ್ನು ಹೊಂದಿರುವ ಎಸ್ಆರ್ಹೆಚ್ ಮುಂದಿರುವ ದೊಡ್ಡ ಸಾವಾಲೆಂದರೆ ನಾಯಕನ ಆಯ್ಕೆ. ಏಕೆಂದರೆ ಕಳೆದ ಸೀಸನ್ನಲ್ಲಿ ಸನ್ರೈಸರ್ಸ್ ತಂಡವನ್ನು ಮುನ್ನಡೆಸಿದ್ದ ಕೇನ್ ವಿಲಿಯಮ್ಸನ್ ಈ ಬಾರಿ ಗುಜರಾತ್ ಟೈಟಾನ್ಸ್ ಪಾಲಾಗಿದ್ದಾರೆ. ಹೀಗಾಗಿ ಈ ಸಲ ಎಸ್ಆರ್ಹೆಚ್ ತಂಡವು ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿದೆ.

ಆದರೆ ತಂಡ ಹೊಸ ನಾಯಕ ಯಾರು ಎಂಬುದನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಇನ್ನೂ ಕೂಡ ಬಹಿರಂಗಪಡಿಸಿಲ್ಲ. ಇದಕ್ಕೆ ಒಂದು ಕಾರಣ ಫ್ರಾಂಚೈಸಿ ಮುಂದಿರುವ ಮೂರು ಆಯ್ಕೆಗಳು. ಅಂದರೆ ಎಸ್ಆರ್ಹೆಚ್ ತಂಡದ ನಾಯಕರುಗಳ ರೇಸ್ನಲ್ಲಿ ಮೂವರು ಅಂತಾರಾಷ್ಟ್ರೀಯ ಕ್ರಿಕೆಟಿಗರಿದ್ದಾರೆ. ಇವರಲ್ಲಿ ಒಬ್ಬರಿಗೆ ನಾಯಕತ್ವ ಒಲಿಯುವುದು ಖಚಿತ ಎನ್ನಲಾಗುತ್ತಿದೆ. ಹಾಗಿದ್ರೆ ಸನ್ರೈಸರ್ಸ್ ಹೈದರಾಬಾದ್ ನಾಯಕತ್ವದ ರೇಸ್ನಲ್ಲಿರುವ ಆಟಗಾರರು ಯಾರೆಲ್ಲಾ ಎಂದು ನೋಡೋಣ...

ಮಯಾಂಕ್ ಅಗರ್ವಾಲ್: ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಈ ಬಾರಿ ಎಸ್ಆರ್ಹೆಚ್ ಫ್ರಾಂಚೈಸಿ 8.25 ಕೋಟಿಗೆ ಖರೀದಿಸಿದೆ. ಇದರ ಬೆನ್ನಲ್ಲೇ ಮಯಾಂಕ್ಗೆ ಎಸ್ಆರ್ಹೆಚ್ ಕ್ಯಾಪ್ಟನ್ ಪಟ್ಟ ಒಲಿಯಲಿದೆ ಎಂಬ ಚರ್ಚೆಗಳು ಶುರುವಾಗಿದೆ. ಏಕೆಂದರೆ ಕಳೆದ ಸೀಸನ್ನಲ್ಲಿ ಪಂಜಾಬ್ ತಂಡವನ್ನು 14 ಪಂದ್ಯಗಳಲ್ಲಿ ಮುನ್ನಡೆಸಿದ್ದ ಅಗರ್ವಾಲ್ 7 ಪಂದ್ಯಗಳಲ್ಲಿ ಗೆಲುವಿನ ರುಚಿ ನೋಡಿದ್ದರು. ಇದೀಗ ಹೊಸ ತಂಡ ಕಟ್ಟಿರುವ ಎಸ್ಆರ್ಹೆಚ್ ಭಾರತೀಯ ನಾಯಕನಿಗೆ ಮಣೆಹಾಕುವ ಸಾಧ್ಯತೆಯಿದೆ.

ಏಡನ್ ಮಾರ್ಕ್ರಾಮ್: ಐಪಿಎಲ್ 2022 ರಲ್ಲಿ ಎಸ್ಆರ್ಹೆಚ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ಸೌತ್ ಆಫ್ರಿಕಾ ಆಟಗಾರ ಏಡನ್ ಮಾರ್ಕ್ರಾಮ್ ಕೂಡ ನಾಯಕತ್ವದ ನಿರೀಕ್ಷೆಯಲ್ಲಿದ್ದಾರೆ. ಈ ಹಿಂದೆ ಸೌತ್ ಆಫ್ರಿಕಾ ಅಂಡರ್ 19 ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಮಾರ್ಕ್ರಾಮ್ ಕೂಡ ಎಸ್ಆರ್ಹೆಚ್ ತಂಡದ ಮುಂದಿರುವ ಉತ್ತಮ ಆಯ್ಕೆ. ಹೀಗಾಗಿಯೇ ಎ್್ಆರ್ಹೆಚ್ ಫ್ರಾಂಚೈಸಿಯು ವಿದೇಶಿ ಆಟಗಾರನಿಗೆ ನಾಯಕತ್ವ ನೀಡಲು ಮುಂದಾದರೆ ಕ್ಯಾಪ್ಟನ್ ಪಟ್ಟ ಏಡನ್ ಮಾರ್ಕ್ರಾಮ್ ಪಾಲಾಗಲಿದೆ ಎನ್ನಲಾಗುತ್ತಿದೆ.

ಭುವನೇಶ್ವರ್ ಕುಮಾರ್: ಸನ್ರೈಸರ್ಸ್ ಹೈದರಾಬಾದ್ ತಂಡದ ಉಪನಾಯಕನಾಗಿ ಗುರುತಿಸಿಕೊಂಡಿರುವ ವೇಗಿ ಭುವನೇಶ್ವರ್ ಕುಮಾರ್ ಕೂಡ ನಾಯಕತ್ವದ ರೇಸ್ನಲ್ಲಿ ಕೇಳಿ ಬರುತ್ತಿದೆ. ಈ ಹಿಂದೆ 7 ಪಂದ್ಯಗಳಲ್ಲಿ ಎಸ್ಆರ್ಹೆಚ್ ತಂಡವನ್ನು ಮುನ್ನಡೆಸಿದ ಅನುಭವವನ್ನೂ ಕೂಡ ಹೊಂದಿದ್ದಾರೆ. ಅದರಂತೆ ಈ ಮೂವರಲ್ಲಿ ಯಾರಿಗೆ ಎಸ್ಆರ್ಹೆಚ್ ತಂಡ ನಾಯಕನ ಪಟ್ಟ ಸಿಗಲಿದೆ ಕಾದು ನೋಡಬೇಕಿದೆ.

ಸನ್ ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಅನ್ಮೋಲ್‌ಪ್ರೀತ್ ಸಿಂಗ್, ಅಕೇಲ್ ಹೊಸೈನ್, ನಿತೀಶ್ ಕುಮಾರ್ ರೆಡ್ಡಿ, ಮಯಾಂಕ್ ದಾಗರ್, ಉಪೇಂದ್ರ ಯಾದವ್, ಸನ್ವಿರ್ ಸಿಂಗ್, ಸಮರ್ಥ ವ್ಯಾಸ್, ವಿವ್ರಾಂತ್ ಶರ್ಮಾ, ಮಯಾಂಕ್ ಮಾರ್ಕಾಂಡೆ, ಆದಿಲ್ ರಶೀದ್, ಹೆನ್ರಿಕ್ ಕ್ಲಾಸೆನ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್, ಕಾರ್ತಿಕ್ ತ್ಯಾಗಿ, ಫಜಲ್ಹಕ್ ಫಾರೂಕಿ.
Published On - 3:59 pm, Mon, 26 December 22