16ನೇ ಆವೃತ್ತಿಯ ಐಪಿಎಲ್ಗಾಗಿ ಮಿನಿ ಹರಾಜು ಮುಗಿದಿದ್ದು ಎಲ್ಲಾ 10 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸುವುದರೊಂದಿಗೆ ತಮ್ಮ ತಮ್ಮ ತಂಡಗಳನ್ನು ಮತ್ತಷ್ಟು ಬಲಪಡಿಸಿಕೊಂಡಿವೆ. ಒಟ್ಟು 80 ಆಟಗಾರರಿಗೆ ಈ ಬಾರಿ ಅದೃಷ್ಟ ಒಲಿದಿದೆ. ಈಗ ಎಲ್ಲರೂ ಹೊಸ ಸೀಸನ್ ಪ್ರಾರಂಭವಾಗಲು ಕಾಯುತ್ತಿದ್ದಾರೆ. ಆದರೆ, ಇದಕ್ಕೂ ಮುನ್ನ ಐಪಿಎಲ್ ಪಾಳಯದಿಂದ ಒಂದು ಪ್ರಮುಖ ಸುದ್ದಿ ಹೊರಬಿದ್ದಿದೆ.
ವಾಸ್ತವವಾಗಿ ಈ ಬಾರಿಯ ಐಪಿಎಲ್ ಅನ್ನು ಕಳೆದ ಆವೃತ್ತಿಗಳಿಗಿಂತ ವಿಭಿನ್ನವಾಗಿ ಆಯೋಜಿಸಲು ಮುಂದಾಗಿದ್ದ ಐಪಿಎಲ್ ಮಂಡಳಿ ಈ ಆವೃತ್ತಿಯ ವೇಳಾಪಟ್ಟಿಯನ್ನು 60 ದಿನಗಳ ಬದಲು 74 ದಿನಗಳಿಗೆ ವಿಸ್ತರಿಸಿತ್ತು. ಆದರೆ ತನ್ನ ಈಗ ತನ್ನ ನಿಲುವನ್ನು ಬದಲಿಸಿರುವ ಮಂಡಳಿ ಹಳೆಯ ಆವೃತ್ತಿಗಳಂತೆ 60 ದಿನಗಳಲ್ಲಿ 16ನೇ ಆವೃತ್ತಿ ಮುಗಿಸಲು ಮುಂದಾಗಿದೆ.
ಕ್ರೀಡಾ ವೆಬ್‌ಸೈಟ್ ಇನ್‌ಸೈಡ್‌ಸ್ಪೋರ್ಟ್‌ನ ವರದಿಯ ಪ್ರಕಾರ, ಹೊಸ ಸೀಸನ್ ಏಪ್ರಿಲ್ 1 ರಿಂದ ಪ್ರಾರಂಭವಾಗಲಿದ್ದು, ಮೇ 31 ರವರೆಗೆ ನಡೆಯಲಿದೆ. ಇದಕ್ಕೂ ಮೊದಲು, ಬಿಸಿಸಿಐ ಇದನ್ನು 74 ದಿನಗಳವರೆಗೆ ಆಯೋಜಿಸಲು ಬಯಸಿತ್ತು. ಆದರೆ ಈಗ ಈ ಯೋಜನೆಯನ್ನು ಮುಂದಿನ ಸೀಸನ್ಗೆ ಮುಂದೂಡಲಾಗಿದೆ.
ವರದಿಯ ಪ್ರಕಾರ, ಬಿಸಿಸಿಐನ ಈ ನಿರ್ಧಾರಕ್ಕೆ ದೊಡ್ಡ ಕಾರಣ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್. ನಿಗದಿಯಂತೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಜೂನ್ ಆರಂಭದಲ್ಲಿ ಲಂಡನ್‌ನ ಓವಲ್ ಮೈದಾನದಲ್ಲಿ ನಡೆಯಲಿದೆ.
ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನ ರೇಸ್‌ನಲ್ಲಿ ಪ್ರಸ್ತುತ ಆಸ್ಟ್ರೇಲಿಯಾ ಮುಂಚೂಣಿಯಲ್ಲಿದ್ದು, ಭಾರತ ತಂಡ ಎರಡನೇ ಸ್ಥಾನದಲ್ಲಿದೆ. ಈ ಎರಡು ತಂಡಗಳು ಮಾತ್ರ ಅರ್ಹತೆ ಪಡೆದರೆ, ಆಟಗಾರರು ಮಧ್ಯದಲ್ಲಿಯೇ ಐಪಿಎಲ್ನಿಂದ ತೆರಳಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಲೀಗ್‌ನ 74 ದಿನಗಳು ಪೂರ್ಣಗೊಳ್ಳುವ ಮೊದಲೇ ಆಸ್ಟ್ರೇಲಿಯಾ ಮತ್ತು ಭಾರತದ ಅನೇಕ ಸ್ಟಾರ್ ಆಟಗಾರರು ಐಪಿಎಲ್ ತೊರೆಯಬೇಕಾಗುತ್ತದೆ. ಹೀಗಾಗಿ ಇದನ್ನು ತಪ್ಪಿಸಲು ಬಿಸಿಸಿಐ ಈ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ ಎಂದು ತಿಳಿದು ಬಂದಿದೆ
Published On - 10:19 am, Mon, 26 December 22