Updated on: May 23, 2023 | 5:10 PM
IPL 2023 CSK vs GT: ಐಪಿಎಲ್ನಲ್ಲಿ ಇಂದು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ.
ಆದರೆ ಈ ಪಂದ್ಯಕ್ಕೆ ಬಿಸಿಸಿಐ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಅನ್ನು ಆಯ್ಕೆ ಮಾಡಿರುವುದು ಇದೀಗ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಗುರಿಯಾಗಿದೆ. ಏಕೆಂದರೆ ಪ್ಲೇಆಫ್ನಂತಹ ನಿರ್ಣಾಯಕ ಪಂದ್ಯವನ್ನು ಅವರ ತವರು ಮೈದಾನದಲ್ಲಿ ನಡೆಸುತ್ತಿರುವುದು ಎಷ್ಟು ನ್ಯಾಯ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಏಕೆಂದರೆ ಚೆನ್ನೈನಲ್ಲಿ ಪಂದ್ಯ ನಡೆದರೆ ಅದು ಸಿಎಸ್ಕೆ ತಂಡಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಂತೆ. ಈ ಬಾರಿಯ ಟೂರ್ನಿಯ ಲೀಗ್ ಹಂತದ 7 ಪಂದ್ಯಗಳನ್ನು ಸಿಎಸ್ಕೆ ಇದೇ ಮೈದಾನದಲ್ಲಿ ಆಡಿದೆ. ಇದೀಗ ನಿರ್ಣಾಯಕ ಪಂದ್ಯ ಕೂಡ ತವರು ಮೈದಾನದಲ್ಲೇ ನಡೆಯುತ್ತಿದೆ.
ಹಾಗೆಯೇ ಗುಜರಾತ್ ಟೈಟಾನ್ಸ್ ತಂಡಕ್ಕೂ ಸ್ಟೇಡಿಯಂ ಆಯ್ಕೆಯಿಂದ ಅನುಕೂಲವಾಗಿದೆ. ಏಕೆಂದರೆ ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡವು 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ. ಈ ಪಂದ್ಯ ನಡೆಯುವುದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ.
ಅಂದರೆ ಇಂದು ಸಿಎಸ್ಕೆ ವಿರುದ್ಧ ಗುಜರಾತ್ ಟೈಟಾನ್ಸ್ ತಂಡ ಸೋತರೆ ಮುಂದಿನ ಪಂದ್ಯವನ್ನು ತವರು ಮೈದಾನದಲ್ಲೇ ಆಡಲಿದೆ. ಅಂದರೆ ಇಲ್ಲಿ ಮೊದಲ ಕ್ವಾಲಿಫೈಯರ್ ಆಡುವ ಎರಡು ತಂಡಗಳಿಗೆ ತವರು ಮೈದಾನದ ಸಪೋರ್ಟ್ ಸಿಗುವ ಸಾಧ್ಯತೆ ಹೆಚ್ಚು.
ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಎಲಿಮಿನೇಟರ್ ಪಂದ್ಯವನ್ನು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲೇ ಆಡಲಿದೆ. ಇದೀಗ 2 ಮೈದಾನದಲ್ಲೇ 4 ಪಂದ್ಯಗಳನ್ನು ಆಯೋಜಿಸಲು ಮುಂದಾಗಿರುವ ಬಿಸಿಸಿಐ ನಡೆಯನ್ನು ಕ್ರಿಕೆಟ್ ಪ್ರೇಮಿಗಳು ಪ್ರಶ್ನಿಸಿದ್ದಾರೆ.
ಈ ಬಾರಿ 10 ತಂಡಗಳು ಐಪಿಎಲ್ನಲ್ಲಿ ಕಣಕ್ಕಿಳಿದಿದೆ. ಅಂದರೆ 10 ಮೈದಾನದಲ್ಲಿ ಪಂದ್ಯಾವಳಿ ನಡೆದಿದೆ. ಹಾಗಾಗಿ ಪ್ಲೇಆಫ್ಸ್ ಪಂದ್ಯಗಳನ್ನು ತಟಸ್ಥ ಮೈದಾನದಲ್ಲಿ ಆಯೋಜಿಸಲು ಬಿಸಿಸಿಐ ಉತ್ತಮ ಅವಕಾಶವಿತ್ತು. ಇದಾಗ್ಯೂ 2 ತಂಡಗಳಿಗೆ ಅನುಕೂಲವಾಗುವಂತೆ ಮೈದಾನಗಳನ್ನು ಆಯ್ಕೆ ಮಾಡಿಕೊಂಡಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.