ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 7 ರನ್ಗಳಿಂದ ಮಣಿಸಿದ ಡೆಲ್ಲಿ ತಂಡ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಆದರೆ ಗೆಲುವಿನ ಸಂಭ್ರಮದಲ್ಲಿರುವ ತಂಡದ ನಾಯಕ ಡೇವಿಡ್ ವಾರ್ನರ್‌ಗೆ ಬಿಸಿಸಿಐ ದಂಡದ ಬಿಗ್ ಶಾಕ್ ನೀಡಿದೆ.
ವಾಸ್ತವವಾಗಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ನಿಗಧಿತ ಸಮಯಕ್ಕೆ ಓವರ್ ಮುಗಿಸದಿದ್ದಕ್ಕಾಗಿ ಡೆಲ್ಲಿ ತಂಡದ ನಾಯಕ ಡೇವಿಡ್ ವಾರ್ನರ್‌ಗೆ ಬಿಸಿಸಿಐ 12 ಲಕ್ಷ ರೂ. ದಂಡ ವಿಧಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಐಪಿಎಲ್ ಮಂಡಳಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಅವರು ನಿಧಾನಗತಿಯ ಓವರ್‌ರೇಟ್ ಅನ್ನು ಕಾಯ್ದುಕೊಂಡಿದ್ದರಿಂದ ದಂಡ ವಿಧಿಸಲಾಗಿದೆ. ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ಇದು ಅವರ ತಂಡದ ಮೊದಲ ಅಪರಾಧವಾಗಿರುವುದರಿಂದ, ವಾರ್ನರ್‌ಗೆ ರೂ. 12 ಲಕ್ಷ ವಿಧಿಸಲಾಗಿದೆ ಎಂದು ತಿಳಿಸಿದೆ.
ಈ ಬಾರಿಯ ಐಪಿಎಲ್‌ನಲ್ಲಿ ಸತತ ಐದು ಪಂದ್ಯಗಳನ್ನು ಸೋತು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದ್ದ ಡಿಸಿಗೆ ಸತತ ಎರಡನೇ ಗೆಲುವು ಸಿಕ್ಕ ಬಳಿಕವೂ ತಂಡ ಈಗಲೂ ಕೊನೆಯ ಸ್ಥಾನದಲ್ಲಿದೆ. ಸದ್ಯ ಡೆಲ್ಲಿ ತಂಡದ ಐಪಿಎಲ್ ಪ್ಲೇ ಆಫ್ ಆಡಬೇಕೆಂದರೆ ಇನ್ನುಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಿದೆ.
ವಾರ್ನರ್ಗೂ ಮೊದಲ ಆರ್ಸಿಬಿ, ಮುಂಬೈ, ಗುಜರಾತ್, ಲಕ್ನೋ, ರಾಜಸ್ಥಾನ್ ತಂಡದ ನಾಯಕರೂ ಕೂಡ ಇದೇ ಶಿಕ್ಷೆಗೆ ಗುರಿಯಾಗಿದ್ದಾರೆ. ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಎರಡನೇ ಬಾರಿಗೆ ಈ ಶಿಕ್ಷೆಗೆ ಗುರಿಯಾಗಿದ್ದು, ಇನ್ನೊಮ್ಮೆ ಈ ತಪ್ಪು ಮಾಡಿದರೆ, ದಂಡದ ಜೊತೆಗೆ ಒಂದು ಪಂದ್ಯದಿಂದ ನಿಷೇಧಕ್ಕೂ ಒಳಗಾಗಲಿದ್ದಾರೆ.
Published On - 4:15 pm, Tue, 25 April 23