
ಡಿಸೆಂಬರ್ 30 ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ರಿಷಬ್ ಪಂತ್ ಮುಂದಿನ ಕೆಲವು ತಿಂಗಳುಗಳವರೆಗೆ ಕ್ರಿಕೆಟ್ನಿಂದ ದೂರ ಉಳಿಯಲಿದ್ದಾರೆ. ಸುದ್ದಿಯ ಪ್ರಕಾರ, ಪಂತ್ ಐಪಿಎಲ್ ಈ ಬಾರಿಯ ಐಪಿಎಲ್ನಿಂದಲೂ ದೂರ ಉಳಿಯಲಿದ್ದಾರೆ. ಹೀಗಿರುವಾಗ ಪಂತ್ ಬದಲಿಗೆ ದೆಹಲಿ ತಂಡದ ನಾಯಕ ಯಾರು ಎಂಬ ಪ್ರಶ್ನೆ ಎದ್ದಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸುದ್ದಿ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ ಸೀಸನ್ಗೆ ತಂಡದ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡಿದೆ ಎಂದು ತಿಳಿದುಬಂದಿದೆ.

ಟೈಮ್ಸ್ ಆಫ್ ಇಂಡಿಯಾದ ಸುದ್ದಿ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ಡೇವಿಡ್ ವಾರ್ನರ್ ಅವರನ್ನು ನಾಯಕನನ್ನಾಗಿ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ವಾರ್ನರ್‌ಗೆ ಈಗಾಗಲೇ ಐಪಿಎಲ್‌ನಲ್ಲಿ ನಾಯಕನಾಗಿ ಉತ್ತಮ ಅನುಭವವಿದೆ. ಈ ಹಿಂದೆ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ ತಂಡ ಕೂಡ ಐಪಿಎಲ್ ಚಾಂಪಿಯನ್ ಆಗಿತ್ತು.

ಅಲ್ಲದೆ ಡೆಲ್ಲಿ ತಂಡದ ನಾಯಕತ್ವದ ಜೊತೆಗೆ ವಿಕೆಟ್ ಕೀಪಿಂಗ್ ಕೂಡ ನಿಭಾಯಿಸುತ್ತಿದ್ದ ರಿಷಭ್ ಪಂತ್ ಬದಲು ಸರ್ಫರಾಜ್ ಖಾನ್ ವಿಕೆಟ್ ಕೀಪಿಂಗ್ ನಿರ್ವಹಿಸಲಿದ್ದಾರೆ.

ಹಾಗೆಯೇ ರಿಷಬ್ ಪಂತ್ ಅಲಭ್ಯತೆಯಿಂದ ತಂಡದಲ್ಲಿ ಖಾಲಿಯಾಗಿರುವ ಆ ಜಾಗಕ್ಕೆ ಭಾರತದ ಅಂಡರ್-19 ತಂಡವನ್ನು ವಿಶ್ವ ಚಾಂಪಿಯನ್ ಮಾಡಿದ ಯಶ್ ಧುಲ್ಗೆ ಅವಕಾಶ ಸಿಗುವ ಸಾಧ್ಯತೆಗಳಿವೆ. ಕಳೆದ ಸೀಸನ್‌ನಲ್ಲಿಯೇ ಯಶ್ ಧುಲ್ ಅವರನ್ನು ದೆಹಲಿ ಖರೀದಿಸಿತ್ತು ಆದರೆ ಅವರಿಗೆ ತಂಡದಲ್ಲಿ ಹೆಚ್ಚಿನ ಅವಕಾಶ ಸಿಕಿರಲಿಲ್ಲ.

ಇನ್ನು ರಿಷಬ್ ಪಂತ್ ಆರೋಗ್ಯದ ಬಗ್ಗೆ ಹೇಳಬೇಕಂದರೆ, ಸದ್ಯ ಪಂತ್ರನ್ನು ಬುಧವಾರ ಡೆಹ್ರಾಡೂನ್‌ನಿಂದ ವಿಮಾನದ ಮೂಲಕ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲದೆ ಪಂತ್‌ಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದರೆ ಇಂಗ್ಲೆಂಡ್‌ಗೂ ಕಳುಹಿಸಬಹುದು ಎಂದು ಹೇಳಲಾಗುತ್ತಿದೆ. ಹಾಗೆಯೇ ಪಂತ್ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಬಿಸಿಸಿಐ ಭರಿಸುತ್ತಿದೆ.
Published On - 1:50 pm, Thu, 5 January 23