- Kannada News Photo gallery Cricket photos IPL 2023: Gujarat Titans's Josh Little suffers Injury Scare Kannada News zp
IPL 2023: ಗುಜರಾತ್ ಟೈಟಾನ್ಸ್ ತಂಡಕ್ಕೂ ಎದುರಾಯ್ತು ಗಾಯದ ಸಮಸ್ಯೆ..!
IPL 2023 Kannada: ಐಪಿಎಲ್ ಸೀಸನ್ 16 ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಗುಜರಾತ್ ಟೈಟಾನ್ಸ್ ತಂಡದ ಯುವ ವೇಗಿ ಕೂಡ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ.
Updated on: Feb 25, 2023 | 9:23 PM

IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ತಿಂಗಳು ಮಾತ್ರ ಉಳಿದಿರುವಾಗ ಆಟಗಾರರಲ್ಲಿ ಗಾಯದ ಸಮಸ್ಯೆಗಳು ಎದುರಾಗುತ್ತಿದೆ. ಈಗಾಗಲೇ ಗಾಯದ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್ ಐಪಿಎಲ್ನಿಂದ ಹೊರಗುಳಿದಿದ್ದಾರೆ.

ಇನ್ನು ಗಾಯದ ಕಾರಣ ರಾಜಸ್ಥಾನ್ ರಾಯಲ್ಸ್ ವೇಗಿ ಪ್ರಸಿದ್ಧ್ ಕೃಷ್ಣ ಕೂಡ ಐಪಿಎಲ್ ಸೀಸನ್ 16 ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಗುಜರಾತ್ ಟೈಟಾನ್ಸ್ ತಂಡದ ಯುವ ವೇಗಿ ಕೂಡ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ.

ಹೌದು, ಗುಜರಾತ್ ಟೈಟಾನ್ಸ್ ತಂಡವು 4.4 ಕೋಟಿಗೆ ಖರೀದಿಸಿದ ಐರ್ಲೆಂಡ್ ತಂಡದ ಯುವ ವೇಗಿ ಜೋಶ್ ಲಿಟಲ್ ಮಂಡಿರಜ್ಜು ಬಿಗಿತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಪಾಕಿಸ್ತಾನ್ ಸೂಪರ್ ಲೀಗ್ನಿಂದ ಹೊರಗುಳಿದಿದ್ದಾರೆ.

ಇದೀಗ ಪಿಎಸ್ಎಲ್ನಿಂದ ಜೋಶ್ ಲಿಟಲ್ ಹೊರಗುಳಿದಿರುವುದು ಗುಜರಾತ್ ಟೈಟಾನ್ಸ್ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇದಾಗ್ಯೂ ಸದ್ಯ ವಿಶ್ರಾಂತಿಯಲ್ಲಿರುವ ಐರಿಷ್ ಆಟಗಾರ, ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಐರ್ಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಸರಣಿಯು ಮಾರ್ಚ್ 18 ರಿಂದ ಶುರುವಾಗಲಿದೆ. ಈ ಸರಣಿಯಿಂದ ಗಾಯದ ಕಾರಣ ಜೋಶ್ ಹೊರಗುಳಿದರೆ, ಐಪಿಎಲ್ ಅನ್ನು ಕೂಡ ತಪ್ಪಿಸಿಕೊಳ್ಳುವುದು ಖಚಿತ. ಹೀಗಾಗಿ ಒಂದು ತಿಂಗಳಲ್ಲಿ ಜೋಶ್ ಲಿಟಲ್ ಫಿಟ್ನೆಸ್ನತ್ತ ಹೆಚ್ಚಿನ ಗಮನಹರಿಸಲಿದ್ದಾರೆ.

ಐರ್ಲೆಂಡ್ ಪರ 53 ಟಿ20 ಪಂದ್ಯಗಳನ್ನಾಡಿರುವ ಜೋಶ್ ಲಿಟಲ್ ಒಟ್ಟು 62 ವಿಕೆಟ್ ಪಡೆದು ಮಿಂಚಿದ್ದಾರೆ. ಹಾಗೆಯೇ 25 ಏಕದಿನ ಪಂದ್ಯಗಳಿಂದ 38 ವಿಕೆಟ್ ಕಬಳಿಸಿದ್ದಾರೆ. ಇದೇ ಕಾರಣದಿಂದಾಗಿ ಗುಜರಾತ್ ಟೈಟಾನ್ಸ್ ತಂಡವು ಈ ಬಾರಿ 4.4 ಕೋಟಿ ರೂ. ನೀಡಿ ಜೋಶ್ ಲಿಟಲ್ ಅವರನ್ನು ಖರೀದಿಸಿತ್ತು. ಇದೀಗ ಗಾಯದ ಸಮಸ್ಯೆ ಎದುರಾಗಿರುವುದು ಫ್ರಾಂಚೈಸಿಯ ಚಿಂತೆಯನ್ನು ಹೆಚ್ಚಿಸಿದೆ.

ಗುಜರಾತ್ ಟೈಟಾನ್ಸ್ ತಂಡ ಹೀಗಿದೆ: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್ , ದರ್ಶನ್ ನಲ್ಕಂಡೆ, ಜಯಂತ್ ಯಾದವ್, ಆರ್ ಸಾಯಿ ಕಿಶೋರ್, ನೂರ್ ಅಹ್ಮದ್, ಮೋಹಿತ್ ಶರ್ಮಾ, ಜೋಶ್ ಲಿಟಲ್, ಉರ್ವಿಲ್ ಪಟೇಲ್, ಶಿವಂ ಮಾವಿ, ಕೆಎಸ್ ಭರತ್, ಓಡಿಯನ್ ಸ್ಮಿತ್ , ಕೇನ್ ವಿಲಿಯಮ್ಸನ್.




