Updated on: May 09, 2023 | 3:24 PM
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಮುಂಬೈ ಪಾಳಯಕ್ಕೆ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ವೇಗಿ ಜೋಫ್ರಾ ಆರ್ಚರ್ ಇಂಜುರಿಯಿಂದಾಗಿ ಈ ಆವೃತ್ತಿಯ ಐಪಿಎಲ್ನಿಂದ ಹೊರಗುಳಿದಿದ್ದಾರೆ.
ಜೋಫ್ರಾ ಆರ್ಚರ್ ಇಂಜುರಿಯಿಂದ ಬಳಲುತ್ತಿರುವುದು ಇದೇ ಮೊದಲಲ್ಲ. ಕಳೆದ ಆವೃತ್ತಿಯಲ್ಲೇ ಮುಂಬೈ ಸೇರಿಕೊಂಡಿದ್ದ ಆರ್ಚರ್ ಒಂದೇ ಒಂದು ಪಂದ್ಯವನ್ನಾಡಿರಲಿಲ್ಲ. ಆದರೂ ಫ್ರಾಂಚೈಸಿ ಅವರನ್ನು ಉಳಿಸಿಕೊಂಡಿತ್ತು.
ಆದರೆ ಈ ಆವೃತ್ತಿಯಲ್ಲಿ ಮುಂಬೈ ಆಡಿರುವ 10 ಪಂದ್ಯಗಳಲ್ಲಿ ಜೋಫ್ರಾ ಆರ್ಚರ್ ಕೇವಲ 5 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಈ ಐದು ಪಂದ್ಯಗಳಲ್ಲಿ ಕೇವಲ 2 ವಿಕೆಟ್ ಮಾತ್ರ ಪಡೆದಿದ್ದಾರೆ.
ಇದೀಗ ಐಪಿಎಲ್ನಿಂದ ಹೊರಬಿದ್ದಿರುವ ಆರ್ಚರ್ ಬದಲಿಯಾಗಿ ಇಂಗ್ಲೆಂಡ್‌ನ ವೇಗದ ಬೌಲರ್ ಕ್ರಿಸ್ ಜೋರ್ಡಾನ್ ಅವರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಈಗಾಗಲೇ ಸೇರಿಸಿಕೊಳ್ಳಲಾಗಿದೆ. ಜೋರ್ಡಾನ್ ಮುಂಬೈ ಪಾಳಯವನ್ನು ಸೇರಿಕೊಂಡಾಗಿನಿಂದ ಆರ್ಚರ್ ಐಪಿಎಲ್ ತೊರೆಯುವ ಬಗ್ಗೆ ಊಹಾಪೋಹಗಳು ಕೇಳಲಾರಂಭಿಸಿದ್ದವು. ಇದೀಗ ಆ ವದಂತಿಗಳಿಗೆ ತೆರೆ ಎಳೆಯಲಾಗಿದೆ.
ವಾಸ್ತವವಾಗಿ ಮುಂಬೈನ ಆರಂಭಿಕ ಪಂದ್ಯಗಳಿಗೆ ಆರ್ಚರ್ ಲಭ್ಯರಾಗಿರಲಿಲ್ಲ. ಆ ವೇಳೆ ಅವರು ಚಿಕಿತ್ಸೆಗಾಗಿ ಬೆಲ್ಜಿಯಂಗೆ ಹೋಗಿದ್ದರು ಎಂದು ವರದಿಗಳು ಕೇಳಿಬಂದಿದ್ದವು. ಆದರೆ ಆರ್ಚರ್ ಆ ವರದಿಯನ್ನು ನಿರಾಕರಿಸಿದ್ದರು. ಇದೀಗ ಆರ್ಚರ್ ಐಪಿಎಲ್ನಿಂದ ಹೊರಬಿದ್ದಿರುವುದು ವದಂತಿಗಳು ನಿಜ ಎಂಬುದನ್ನು ಸಾಭೀತುಪಡಿಸಿವೆ.
ಇತರ ಮೂಲಗಳ ಪ್ರಕಾರ ಹೇಳುವುದಾದರೆ, ಜೋಫ್ರಾ ಆರ್ಚರ್ ಗಾಯದ ಮೇಲೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿರಂತರವಾಗಿ ಕಣ್ಣಿಟ್ಟಿದೆ. ಮುಂಬರುವ ಆಶಸ್‌ನಂತಹ ದೊಡ್ಡ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಆರ್ಚರ್ ಅವರನ್ನು ಐಪಿಎಲ್ನಿಂದ ಹಿಂದೆ ಸರಿಯುವಂತೆ ಮಾಡಿದೆ ಎಂಬ ಮಾತು ಕೇಳಿಬರುತ್ತಿದೆ. ಆಶಸ್ ಸರಣಿಗೂ ಮುನ್ನ ಆರ್ಚರ್ ಫಿಟ್ ಆಗಿರವುದು ಇಂಗ್ಲೆಂಡ್ ತಂಡಕ್ಕೆ ಬಹಳ ಮುಖ್ಯವಾಗಿದೆ. ಅದಕ್ಕಾಗಿಯೇ ಆರ್ಚರ್ ಐಪಿಎಲ್ ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ.
2022ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಜೋಫ್ರಾ ಆರ್ಚರ್ ಅವರನ್ನು ಬರೋಬ್ಬರಿ 8 ಕೋಟಿಗೆ ಖರೀದಿಸಿತು. ಆದರೆ ಗಾಯದ ಕಾರಣ ಕಳೆದ ಸೀಸನ್ನಲ್ಲಿ ಅವರು ಸಂಪೂರ್ಣ ಆಡಲು ಸಾಧ್ಯವಾಗಲಿಲ್ಲ. ಇದೀಗ ಈ ಐಪಿಎಲ್ನಲ್ಲಿ ಅವರು ಕೇವಲ 5 ಪಂದ್ಯಗಳನ್ನು ಆಡಿ ಲೀಗ್ಯಿಂದ ಹೊರಬಿದ್ದಿದ್ದಾರೆ.
2016 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಕ್ರಿಸ್ ಜೋರ್ಡಾನ್, ಆರ್ಚರ್ ಸ್ಥಾನಕ್ಕೆ ಬಂದಿದ್ದು, ಇಂಗ್ಲೆಂಡ್ ಪರ 87 ಟಿ20 ಪಂದ್ಯಗಳಲ್ಲಿ 96 ವಿಕೆಟ್ ಪಡೆದಿರುವ ಜೋರ್ಡಾನ್ ಐಪಿಎಲ್ನಲ್ಲಿ 28 ಪಂದ್ಯಗಳನ್ನು ಆಡಿದ್ದು, 27 ವಿಕೆಟ್ ಪಡೆದಿದ್ದಾರೆ.