Updated on: Mar 20, 2023 | 8:31 PM
7 ಓವರ್ನಲ್ಲಿ ಒಂದೇ ಒಂದು ರನ್ ನೀಡದೇ 7 ವಿಕೆಟ್ ಪಡೆಯಲು ಸಾಧ್ಯವೇ? ಕ್ರಿಕೆಟ್ ಅಂಗಳದಲ್ಲಿ ಅಸಾಧ್ಯ ಎನಿಸುವ ಸಾಧನೆಯನ್ನು ಮಾಡಿ ತೋರಿಸಿದ್ದಾರೆ ವೆಸ್ಟ್ ಇಂಡೀಸ್ನ ಸ್ಪಿನ್ ಮಾಂತ್ರಿಕ ಸುನಿಲ್ ನರೈನ್.
ವೆಸ್ಟ್ ಇಂಡೀಸ್ನ ಪೋರ್ಟ್-ಆಫ್-ಸ್ಪೇನ್‌ನಲ್ಲಿ ಟಿ ಅ್ಯಂಡ್ ಟಿ ಬೋರ್ಡ್ ಪ್ರೀಮಿಯರ್‌ಶಿಪ್ ಡಿವಿಷನ್ I ಟೂರ್ನಿ ನಡೆಯುತ್ತಿದ್ದು, ಈ ಟೂರ್ನಿಯಲ್ಲಿ ಕ್ವೀನ್ಸ್ ಪಾರ್ಕ್ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿದ ಸುನಿಲ್ ನರೈನ್ ಏಳು ಮೇಡನ್ ಓವರ್‌ಗಳನ್ನು ಎಸೆದು 7 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕ್ಲಾರ್ಕ್ ರೋಡ್ ಯುನೈಟೆಡ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ನಿರೀಕ್ಷೆಯಲ್ಲಿತ್ತು. ಆದರೆ ಸುನಿಲ್ ನರೈನ್ ದಾಳಿಗಿಳಿಯುತ್ತಿದ್ದಂತೆ ತಂಡದ ಲೆಕ್ಕಾಚಾರಗಳು ತಲೆಕೆಳಗಾದವು.
ಮೊದಲ ಓವರ್ನಲ್ಲೇ ಜಾನ್ ರಸ್ ಜಗ್ಗೇಸರ್ ಮತ್ತು ಸಿಯಾನ್ ಹ್ಯಾಕೆಟ್ ವಿಕೆಟ್ ಪಡೆದ ನರೈನ್, ಆ ಬಳಿಕ ಡಿಜೋರ್ನ್ ಚಾರ್ಲ್ಸ್, ನಿಕೋಲಸ್ ಸೂಕ್‌ಡಿಯೋಸಿಂಗ್ ಮತ್ತು ಜೋಶುವಾ ಪರ್ಸಾಡ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಇದಾದ ಬಳಿಕ ಮತ್ತೆರಡು ವಿಕೆಟ್ ಉರುಳಿಸುವ ಮೂಲಕ 7 ಮೇಡನ್ ಓವರ್‌ಗಳಲ್ಲಿ 7 ವಿಕೆಟ್ಗಳ ಸಾಧನೆ ಮಾಡಿದರು.
ಸುನಿಲ್ ನರೈನ್ ಅವರ ಸ್ಪಿನ್ ಮೋಡಿಗೆ ತತ್ತರಿಸಿದ ಕ್ಲಾರ್ಕ್ ರೋಡ್ ಯುನೈಟೆಡ್ ತಂಡವು ಕೇವಲ 24 ಓವರ್‌ಗಳಲ್ಲಿ 76 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಈ ಏಳು ವಿಕೆಟ್ಗಳ ಸಾಧನೆಯೊಂದಿಗೆ ಈ ಟೂರ್ನಿಯಲ್ಲಿ ಸತತ 4ನೇ ಬಾರಿಗೆ 5 ವಿಕೆಟ್ಗಳನ್ನು ಪಡೆದ ವಿಶೇಷ ದಾಖಲೆಯನ್ನು ಕೂಡ ಸುನಿಲ್ ನರೈನ್ ನಿರ್ಮಿಸಿದ್ದಾರೆ.
ಐಪಿಎಲ್ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಸುನಿಲ್ ನರೈನ್ ಅವರ ಈ ಸ್ಪಿನ್ ಮೋಡಿಯು ಇದೀಗ ಎಲ್ಲರು ನಿಬ್ಬೆರಗಾಗುವಂತೆ ಮಾಡಿದೆ. ಏಕೆಂದರೆ ಈ ಬಾರಿ ಕೂಡ ನರೈನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದು, ಭಾರತೀಯ ಸ್ಪಿನ್ ಸ್ನೇಹಿ ಪಿಚ್ಗಳಲ್ಲಿ ವಿಂಡೀಸ್ ಸ್ಪಿನ್ ಮಾಂತ್ರಿಕ ಮೋಡಿ ಮಾಡುವ ನಿರೀಕ್ಷೆಯಿದೆ.