- Kannada News Photo gallery Cricket photos IPL 2023: Mark Wood, One Of IPL's Fastest Pacers Bags 5 Wicket Haul
Mark Wood: ಅಂದು ಬೇಸರದಿಂದ IPL ತೊರೆದಿದ್ದ ಮಾರ್ಕ್ ವುಡ್ ಇಂದು ಭರ್ಜರಿ ಕಂಬ್ಯಾಕ್..!
IPL 2023 Kannada: 5 ವರ್ಷಗಳ ಬಳಿಕ ಐಪಿಎಲ್ಗೆ ಭರ್ಜರಿ ಕಂಬ್ಯಾಕ್ ಮಾಡಿರುವ ಮಾರ್ಕ್ ವುಡ್ ಈ ಬಾರಿಯ ಸೀಸನ್ನಲ್ಲಿ ತಮ್ಮ ಮಾರಕ ದಾಳಿ ಮೂಲಕ ಎದುರಾಳಿಗಳನ್ನು ಕಂಗೆಡಿಸುವ ಸೂಚನೆಯನ್ನಂತು ನೀಡಿದ್ದಾರೆ.
Updated on: Apr 02, 2023 | 3:58 PM

IPL 2023: ಐಪಿಎಲ್ನ 3ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 50 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರುವಾರಿ ಮಾರ್ಕ್ ವುಡ್. ಏಕೆಂದರೆ ಈ ಪಂದ್ಯದಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ವೇಗಿ ಲಕ್ನೋ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.

ವಿಶೇಷ ಎಂದರೆ ಮಾರ್ಕ್ ವುಡ್ಗೆ ಇದು ಐಪಿಎಲ್ನ 2ನೇ ಪಂದ್ಯ. ಅಂದರೆ 2015 ರಲ್ಲಿ ಇಂಗ್ಲೆಂಡ್ ಪರ ಟಿ20 ಕ್ರಿಕೆಟ್ಗೆ ಪಾದರ್ಪಣೆ ಮಾಡಿದ್ದ ವುಡ್ ಐಪಿಎಲ್ಗೆ ಎಂಟ್ರಿ ಕೊಟ್ಟಿದ್ದು 2018 ರಲ್ಲಿ. ಅಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ ಪರ ಪಾದರ್ಪಣೆ ಮಾಡಿದ್ದ ವುಡ್ 4 ಓವರ್ಗಳಲ್ಲಿ 49 ರನ್ ನೀಡಿದ್ದರು. ಇದಾಗ್ಯೂ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ.

ಅಚ್ಚರಿ ಎಂದರೆ ಆ ಪಂದ್ಯದ ಬಳಿಕ ಮಾರ್ಕ್ ವುಡ್ ಮತ್ತೆ ಐಪಿಎಲ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಬರೋಬ್ಬರಿ 5 ವರ್ಷಗಳ ಬಳಿಕ ಐಪಿಎಲ್ಗೆ ಕಂಬ್ಯಾಕ್ ಮಾಡಿದ್ದಾರೆ. ಅದು ಕೂಡ ಅತ್ಯಧ್ಭುತ ಪ್ರದರ್ಶನ ನೀಡುವ ಮೂಲಕ ಎಂಬುದೇ ವಿಶೇಷ.

ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೂಲಕ ಐಪಿಎಲ್ಗೆ ಹಿಂತಿರುಗಿರುವ ಮಾರ್ಕ್ ವುಡ್, ಈ ಬಾರಿಯ ಮೊದಲ ಪಂದ್ಯದಲ್ಲೇ ಪೃಥ್ವಿ ಶಾ, ಮಿಚೆಲ್ ಮಾರ್ಷ್, ಸರ್ಫರಾಝ್ ಖಾನ್, ಅಕ್ಷರ್ ಪಟೇಲ್ ಹಾಗೂ ಚೇತನ್ ಸಕರಿಯಾರ ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಪರ 5 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ.

ಅಷ್ಟೇ ಅಲ್ಲದೆ ಐಪಿಎಲ್ನಲ್ಲಿ 5 ವಿಕೆಟ್ ಪಡೆದ 2ನೇ ಇಂಗ್ಲೆಂಡ್ ವೇಗಿ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2012 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಇಂಗ್ಲೆಂಡ್ ವೇಗಿ ದಿಮಿತ್ರಿ ಮಸ್ಕರೇನಸ್ (ಕಿಂಗ್ಸ್ ಇಲೆವೆನ್ ಪಂಜಾಬ್) 25 ರನ್ಗೆ 5 ವಿಕೆಟ್ ಪಡೆದಿದ್ದರು. ಇದೀಗ ಈ ಸಾಧನೆಯನ್ನು ಮಾರ್ಕ್ ವುಡ್ ಸರಿಗಟ್ಟಿದ್ದಾರೆ.

ಒಟ್ಟಿನಲ್ಲಿ 5 ವರ್ಷಗಳ ಬಳಿಕ ಐಪಿಎಲ್ಗೆ ಭರ್ಜರಿ ಕಂಬ್ಯಾಕ್ ಮಾಡಿರುವ ಮಾರ್ಕ್ ವುಡ್ ಈ ಬಾರಿಯ ಸೀಸನ್ನಲ್ಲಿ ತಮ್ಮ ಮಾರಕ ದಾಳಿ ಮೂಲಕ ಎದುರಾಳಿಗಳನ್ನು ಕಂಗೆಡಿಸುವ ಸೂಚನೆಯನ್ನಂತು ನೀಡಿದ್ದಾರೆ. ಈ ಅದ್ಭುತ ಪ್ರದರ್ಶನ ಮುಂದುವರೆಯಲಿದೆಯಾ ಎಂಬುದು ಕಾದು ನೋಡಬೇಕಿದೆ.




