
IPL 2023: ಐಪಿಎಲ್ ಸೀಸನ್ 16 ರಲ್ಲಿ ಪ್ಲೇಆಫ್ ಪ್ರವೇಶಿಸಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಎಲ್ಲವೂ ಸರಿಯಿಲ್ಲವಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ನಡುವಣ ವಾಕ್ಸಮರ.

ಹೌದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಗೆಲುವಿನ ಬಳಿಕ ಸಿಎಸ್ಕೆ ತಂಡದ ಎಲ್ಲಾ ಆಟಗಾರರು ಸಂಭ್ರಮದಲ್ಲಿದ್ದರೆ, ಇತ್ತ ಮಹೇಂದ್ರ ಸಿಂಗ್ ಧೋನಿ ರವೀಂದ್ರ ಜಡೇಜಾ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದರು.

ಸಿಎಸ್ಕೆ ತಂಡದ ನಾಯಕನ ಮಾತನ್ನು ಆಲಿಸಿದ್ದ ಜಡೇಜಾ ಅವರ ಮುಖದಲ್ಲಿ ನಿರಾಶಭಾವ ಎದ್ದು ಕಾಣುತ್ತಿತ್ತು. ಅಲ್ಲದೆ ಈ ಮಾತುಕತೆಯೊಂದಿಗೆ ಧೋನಿ ಜಡೇಜಾರನ್ನು ಡಗೌಟ್ಗೆ ಕರೆದೊಯ್ದಿದ್ದರು. ಇದಾಗ್ಯೂ ಜಡೇಜಾ ಅವರ ಮುಖದಲ್ಲಿ ಯಾವುದೇ ಗೆಲುವಿನ ನಗು ಮಾತ್ರ ಬಂದಿರಲಿಲ್ಲ.

ಇದರ ಬೆನ್ನಲ್ಲೇ ಧೋನಿ ಹಾಗೂ ಜಡೇಜಾ ನಡುವಣ ವಾಕ್ಸಮರದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಇಬ್ಬರ ನಡುವೆ ಬಿರುಕು ಮೂಡಿದ್ಯಾ ಎಂಬ ಅನುಮಾನಗಳು ಕೂಡ ಹುಟ್ಟಿಕೊಂಡಿದೆ.

ಏಕೆಂದರೆ ಕಳೆದ ಸೀಸನ್ನಲ್ಲಿ ಜಡೇಜಾ ಅವರನ್ನು ನಾಯಕರನ್ನಾಗಿಸಿದ ಸಿಎಸ್ಕೆ ಕೆಲ ಪಂದ್ಯಗಳ ಬಳಿಕ ಕಪ್ತಾನನ ಸ್ಥಾನದಿಂದ ಕೆಳಗಿಳಿಸಿದ್ದರು. ಅಲ್ಲದೆ ಈ ಬಾರಿ ಜಡೇಜಾ ಸಿಎಸ್ಕೆ ಪರ ಆಡುವುದಿಲ್ಲ ಎಂಬ ಸುದ್ದಿಗಳು ಕೂಡ ಹರಿದಾಡಿದ್ದವು.

ಆದರೆ ಅಂತಿಮ ಕ್ಷಣದಲ್ಲಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಜಡೇಜಾ ಸಿಎಸ್ಕೆ ತಂಡದಲ್ಲೇ ಮುಂದುವರೆಯುವುದಾಗಿ ತಿಳಿಸಿದ್ದರು. ಇದೀಗ ಮೈದಾನದಲ್ಲೇ ಧೋನಿ ಜಡೇಜಾಗೆ ಕ್ಲಾಸ್ ತೆಗೆದುಕೊಂಡಿರುವುದು ಸಿಎಸ್ಕೆ ತಂಡದ ಸ್ಟಾರ್ ಆಟಗಾರರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನವನ್ನು ಹುಟ್ಟುಹಾಕಿದೆ.