Updated on: May 25, 2023 | 7:22 PM
IPL 2023: ಮೇ 1 ರಂದು ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಆರ್ಸಿಬಿ ನಡುವಣ ಪಂದ್ಯ ಬಳಿಕ ನವೀನ್ ಉಲ್ ಹಕ್ ಕಿಂಗ್ ಕೊಹ್ಲಿಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ನವೀನ್ ಪರಸ್ಪರ ವಾಗ್ವಾದಕ್ಕಿಳಿದಿದ್ದರು. ಅಲ್ಲದೆ ಪಂದ್ಯದ ಬಳಿಕ ಕೂಡ ಮುಂದುವರೆದ ಈ ವಾಕ್ಸಸಮರದ ವೇಳೆ ನವೀನ್ ಕೊಹ್ಲಿಯ ಕೈ ಎಳೆದಿದ್ದರು. ಇದು ಅಲ್ಲಿಗೆ ಮುಗಿಯಿತು ಎಂದುಕೊಂಡರೆ ಲಕ್ನೋ ಸೂಪರ್ ಜೈಂಟ್ಸ್ ವೇಗಿ ಇದನ್ನು ಸೋಷಿಯಲ್ ಮೀಡಿಯಾಗೂ ಎಳೆದು ತಂದಿದ್ದರು.
ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬೇಗನೆ ಔಟ್ ಆಗಿರುವುದನ್ನು ಸ್ವೀಟ್ ಮ್ಯಾಂಗೋ ಮೂಲಕ ಸಂಭ್ರಮಿಸಿದ್ದರು. ಇನ್ಸ್ಟಾಗ್ರಾಮ್ನಲ್ಲಿ ಹಾಕಿಕೊಂಡಿದ್ದ ಈ ಪೋಸ್ಟ್ ವೈರಲ್ ಆದ ಬಳಿಕ ನವೀನ್ ಉಲ್ ಹಕ್ ವಿರಾಟ್ ಕೊಹ್ಲಿಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರು.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಯಾವುದೇ ಮ್ಯಾಚ್ ಇದ್ದರೂ, ನವೀನ್ ಉಲ್ ಹಕ್ ಅವರನ್ನು ಸ್ಟೇಡಿಯಂನಲ್ಲಿರುತ್ತಿದ್ದ ವಿರಾಟ್ ಕೊಹ್ಲಿ ಅಭಿಮಾನಿಗಳು ಕೊಹ್ಲಿ...ಕೊಹ್ಲಿ ಹೆಸರಿನೊಂದಿಗೆ ಕೆಣಕುತ್ತಿದ್ದರು. ಅತ್ತ ಕೊಹ್ಲಿ ಹೆಸರು ಕೇಳುತ್ತಿದ್ದಂತೆ ನವೀನ್ ಕೂಡ ಕೆರಳುತ್ತಿದ್ದರು.
ಇದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆಯೂ ಮುಂದುವರೆದಿತ್ತು. ಇದೇ ಕಾರಣದಿಂದಾಗಿ ನವೀನ್ ಉಲ್ ಹಕ್ ವಿಕೆಟ್ ಪಡೆದ ಬಳಿಕ ಕಿವಿ ಮುಚ್ಚುವ ಮೂಲಕ ಸಂಭ್ರಮಿಸಿದ್ದರು.
ಇದೀಗ ಮೈದಾನದಲ್ಲಿ ಕಿಂಗ್ ಕೊಹ್ಲಿಯ ಹೆಸರಿನೊಂದಿಗೆ ಟೂರ್ನಿಯುದ್ದಕ್ಕೂ ಟಾರ್ಗೆಟ್ ಆದ ಬಗ್ಗೆ ಖುದ್ದು ನವೀನ್ ಉಲ್ ಹಕ್ ಮಾತನಾಡಿದ್ದಾರೆ. ಸ್ಟೇಡಿಯಂನಲ್ಲಿ ಅಭಿಮಾನಿಗಳು ನನ್ನನ್ನು ಗುರಿಯಾಗಿಸಿರುವುದನ್ನು ಎಂಜಾಯ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಸ್ಟೇಡಿಯಂನಲ್ಲಿ ಎಲ್ಲರೂ ಕೊಹ್ಲಿ... ಕೊಹ್ಲಿ... ಅಂತ ಅಥವಾ ಬೇರೆ ಆಟಗಾರರ ಹೆಸರು ಕೂಗುವುದು ನನಗೂ ಇಷ್ಟವಾಗುತ್ತದೆ. ನಾನು ಇದನ್ನೆಲ್ಲಾ ಎಂಜಾಯ್ ಮಾಡುತ್ತೇನೆ. ಇದರಿಂದ ನಮ್ಮ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಲು ಉತ್ಸಾಹ ಸಿಗುತ್ತದೆ ಎಂದು ನವೀನ್ ಉಲ್ ಹಕ್ ಹೇಳಿದ್ದಾರೆ.
ಇನ್ನು ನಾನು ಒಳಗಿನ ಅಥವಾ ಹೊರಗಿನ ಶಬ್ದ ಅಥವಾ ಇನ್ಯಾವುದಕ್ಕೂ ಹೆಚ್ಚಿನ ಗಮನ ಕೊಡುವುದಿಲ್ಲ. ನಾನು ಕ್ರಿಕೆಟ್ ಮತ್ತು ನನ್ನ ಪ್ರಕ್ರಿಯೆಯ ಮೇಲೆ ಗಮನ ಕೇಂದ್ರೀಕರಿಸುತ್ತೇನೆ. ಪ್ರೇಕ್ಷಕರ ಘೋಷಣೆಗಳು ಅಥವಾ ಯಾರೇ ಏನೇ ಹೇಳಿದರೂ ನಾನು ಪ್ರಭಾವಿತನಾಗುವುದಿಲ್ಲ ಎಂದು ನವೀನ್ ತಿಳಿಸಿದ್ದಾರೆ.
ಒಬ್ಬ ವೃತ್ತಿಪರ ಆಟಗಾರನಾಗಿ, ನೀವು ನಿಮ್ಮದೇ ಆದ ರೀತಿಯಲ್ಲಿ ಅದನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದೆಲ್ಲವೂ ಆಟದ ಒಂದು ಭಾಗ ಅಷ್ಟೇ ಎಂದು ನವೀನ್-ಉಲ್-ಹಕ್ ಹೇಳಿದ್ದಾರೆ.
ಅಂದಹಾಗೆ ಈ ಬಾರಿಯ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ 7 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ನವೀನ್ ಉಲ್ ಹಕ್, 168 ಎಸೆತಗಳಲ್ಲಿ ನೀಡಿದ್ದು 219 ರನ್ ಮಾತ್ರ. ಅಲ್ಲದೆ 11 ವಿಕೆಟ್ಗಳನ್ನು ಕೂಡ ಕಬಳಿಸಿದ್ದಾರೆ. ಆದರೆ ತಮ್ಮ ಅತ್ಯುತ್ತಮ ಪ್ರದರ್ಶನದಿಂದ ಸುದ್ದಿಯಾಗಬೇಕಿದ್ದ ಆಟಗಾರ ವಿರಾಟ್ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು ಮಾತ್ರ ವಿಪರ್ಯಾಸ.