ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಗಾಗಿ ಎಲ್ಲಾ ತಂಡಗಳು ಸಜ್ಜಾಗಿದೆ. ಈ ಬಾರಿ ನಡೆದ ಮಿನಿ ಹರಾಜಿನ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡ ಕೂಡ ಬಲಿಷ್ಠ ಬಳಗವನ್ನೇ ರೂಪಿಸಿದೆ. ಹರಾಜಿಗೂ ಮುನ್ನ 12 ಆಟಗಾರರನ್ನು ಮಾತ್ರ ಉಳಿಸಿಕೊಂಡಿದ್ದ ಎಸ್ಆರ್ಹೆಚ್ ತಂಡವು ಒಟ್ಟು 13 ಆಟಗಾರರನ್ನು ಖರೀದಿಸಿದೆ.
ಸದ್ಯ 25 ಸದಸ್ಯರ ಬಳಗವನ್ನು ಹೊಂದಿರುವ ಎಸ್ಆರ್ಹೆಚ್ ಮುಂದಿರುವ ದೊಡ್ಡ ಸಾವಾಲೆಂದರೆ ನಾಯಕನ ಆಯ್ಕೆ. ಏಕೆಂದರೆ ಕಳೆದ ಸೀಸನ್ನಲ್ಲಿ ಸನ್ರೈಸರ್ಸ್ ತಂಡವನ್ನು ಮುನ್ನಡೆಸಿದ್ದ ಕೇನ್ ವಿಲಿಯಮ್ಸನ್ ಈ ಬಾರಿ ಗುಜರಾತ್ ಟೈಟಾನ್ಸ್ ಪಾಲಾಗಿದ್ದಾರೆ. ಹೀಗಾಗಿ ಈ ಸಲ ಎಸ್ಆರ್ಹೆಚ್ ತಂಡವು ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿದೆ.
ಆದರೆ ತಂಡ ಹೊಸ ನಾಯಕ ಯಾರು ಎಂಬುದನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಇನ್ನೂ ಕೂಡ ಬಹಿರಂಗಪಡಿಸಿಲ್ಲ. ಇದಾಗ್ಯೂ ಎಸ್ಆರ್ಹೆಚ್ ತಂಡವನ್ನು ಈ ಬಾರಿ ಯಾರು ಮುನ್ನಡೆಸಲಿದ್ದಾರೆ ಎಂಬುದರ ಬಗ್ಗೆ ಟೀಮ್ ಇಂಡಿಯಾ ಆಟಗಾರ ರವಿಚಂದ್ರನ್ ಅಶ್ವಿನ್ ಭವಿಷ್ಯ ನುಡಿದಿದ್ದಾರೆ.
ಚಿಟ್ಚಾಟ್ವೊಂದರಲ್ಲಿ ಮಾತನಾಡಿದ ಅಶ್ವಿನ್, ಎಸ್ಆರ್ಹೆಚ್ ತಂಡವನ್ನು ಈ ಬಾರಿ ಐಡೆನ್ ಮಾರ್ಕ್ರಾಮ್ ಮುನ್ನಡೆಸಲಿದ್ದಾರೆ ಎಂದು ಭಾವಿಸುತ್ತೇನೆ. ಏಕೆಂದರೆ ಅವರು ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಸನ್ರೈಸರ್ಸ್ ಫ್ರಾಂಚೈಸಿ ಮಾಲೀಕತ್ವದ ಈಸ್ಟರ್ನ್ ಕೇಪ್ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ತಂಡಕ್ಕೆ ಚಾಂಪಿಯನ್ ಪಟ್ಟವನ್ನೂ ಕೂಡ ತಂದುಕೊಟ್ಟಿದ್ದಾರೆ. ಹೀಗಾಗಿ ಸನ್ರೈಸರ್ಸ್ ಹೈದರಾಬಾದ್ ತಂಡ ನಾಯಕತ್ವವನ್ನೂ ಅವರಿಗೇ ನೀಡಲಿದ್ದಾರೆ ಎಂದು ಅಶ್ವಿನ್ ಹೇಳಿದ್ದಾರೆ.
ಇನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಎಸ್ಆರ್ಹೆಚ್ ಫ್ರಾಂಚೈಸಿಯು ಉತ್ತಮ ತಂಡವನ್ನು ಆಯ್ಕೆ ಮಾಡಿದ್ದಾರೆ. ಅವರು ಶೀಘ್ರದಲ್ಲೇ ಫಲಿತಾಂಶಗಳನ್ನು ಪಡೆಯಲು ಪ್ರಾರಂಭಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಅಂತಹದೊಂದು ತಂಡವನ್ನು ಎಸ್ಆರ್ಹೆಚ್ ಕಟ್ಟಿದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟರು.
ಅಶ್ವಿನ್ ಅವರ ಪ್ರಕಾರ, ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಐಡೆನ್ ಮಾರ್ಕ್ರಾಮ್ ನಾಯಕರಾಗುವುದು ಬಹುತೇಕ ಖಚಿತ. ಏಕೆಂದರೆ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡವನ್ನು ಮುನ್ನಡೆಸಿದ್ದ ಮಾರ್ಕ್ರಾಮ್ 12 ಪಂದ್ಯಗಳಲ್ಲಿ 366 ರನ್ ಕಲೆಹಾಕಿದ್ದರು. ಅಲ್ಲದೆ 11 ವಿಕೆಟ್ ಕಬಳಿಸುವ ಮೂಲಕ ಅತ್ಯುತ್ತಮ ಆಲ್ರೌಂಡರ್ ಪ್ರದರ್ಶನವನ್ನೂ ಕೂಡ ನೀಡಿದ್ದರು.
ಅಷ್ಟೇ ಅಲ್ಲದೆ ಫೈನಲ್ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಸೌತ್ ಆಫ್ರಿಕಾ ಟಿ20 ಲೀಗ್ನ ಚಾಂಪಿಯನ್ ಆಗಿ ಐಡೆನ್ ಮಾರ್ಕ್ರಾಮ್ ನಾಯಕತ್ವದ ಸನ್ರೈಸರ್ಸ್ ಈಸ್ಟರ್ನ್ ಕೇಪ್ ತಂಡ ಹೊರಹೊಮ್ಮಿತು. ಹೀಗಾಗಿ ಸೌತ್ ಆಫ್ರಿಕಾ ಆಲ್ರೌಂಡರ್ ಎಸ್ಆರ್ಹೆಚ್ ತಂಡದ ನಾಯಕರಾದರೆ ಅಚ್ಚರಿಪಡಬೇಕಿಲ್ಲ.
ಸನ್ ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಅನ್ಮೋಲ್‌ಪ್ರೀತ್ ಸಿಂಗ್, ಅಕೇಲ್ ಹೊಸೈನ್, ನಿತೀಶ್ ಕುಮಾರ್ ರೆಡ್ಡಿ, ಮಯಾಂಕ್ ದಾಗರ್, ಉಪೇಂದ್ರ ಯಾದವ್, ಸನ್ವಿರ್ ಸಿಂಗ್, ಸಮರ್ಥ ವ್ಯಾಸ್, ವಿವ್ರಾಂತ್ ಶರ್ಮಾ, ಮಯಾಂಕ್ ಮಾರ್ಕಾಂಡೆ, ಆದಿಲ್ ರಶೀದ್, ಹೆನ್ರಿಕ್ ಕ್ಲಾಸೆನ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್, ಕಾರ್ತಿಕ್ ತ್ಯಾಗಿ, ಫಜಲ್ಹಕ್ ಫಾರೂಕಿ.