Updated on: May 04, 2023 | 10:07 PM
IPL 2023: ಐಪಿಎಲ್ ಸೀಸನ್ 16 ರಲ್ಲಿ 9 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 5 ರಲ್ಲಿ ಜಯ ಸಾಧಿಸಿದೆ. ಇನ್ನುಳಿದಿರುವುದು ಕೇವಲ 5 ಪಂದ್ಯಗಳು ಮಾತ್ರ. ಪ್ಲೇಆಫ್ ಹಂತಕ್ಕೆ ಪ್ರವೇಶಿಸಲು ನಿರ್ಣಾಯಕವಾಗಿರುವ ಈ ಪಂದ್ಯಗಳಲ್ಲಿ ಆರ್ಸಿಬಿ ತಂಡವು ತನ್ನ ಬ್ಯಾಟಿಂಗ್ ಕ್ರಮಾಂಕವನ್ನು ಸರಿಪಡಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ.
ಏಕೆಂದರೆ ಆರ್ಸಿಬಿ ಆಡಿರುವ 9 ಪಂದ್ಯಗಳಲ್ಲಿ 3ನೇ ಕ್ರಮಾಂಕದಲ್ಲಿ 6 ಆಟಗಾರರು ಕಣಕ್ಕಿಳಿದಿದ್ದಾರೆ. ಇವರಲ್ಲಿ ಮ್ಯಾಕ್ಸ್ವೆಲ್ ಅವರನ್ನು ಹೊರತುಪಡಿಸಿದರೆ ಯಾವುದೇ ಆಟಗಾರ ಯಶಸ್ವಿಯಾಗಿಲ್ಲ ಎಂಬುದು ಅಚ್ಚರಿ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 3ನೇ ಕ್ರಮಾಂಕದಲ್ಲಿ ಆಡಿದ್ದರು. ಈ ವೇಳೆ ಡಿಕೆ ಶೂನ್ಯಕ್ಕೆ ಔಟಾಗಿದ್ದರು.
ಇದಾದ ಬಳಿಕ ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಮೈಕೆಲ್ ಬ್ರೇಸ್ವೆಲ್ ಅವರನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗಿತ್ತು. ಬ್ರೇಸ್ವೆಲ್ 18 ಎಸೆತಗಳನ್ನು ಎದುರಿಸಿದರೂ ಕಲೆಹಾಕಿದ್ದು ಕೇವಲ 19 ರನ್ ಮಾತ್ರ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ವಿರಾಟ್ ಕೊಹ್ಲಿ ಔಟಾದ ಬಳಿಕ ಕ್ರೀಸ್ಗೆ ಆಗಮಿಸಿದ ಮ್ಯಾಕ್ಸಿ ಕೇವಲ 29 ಎಸೆತಗಳಲ್ಲಿ 59 ರನ್ ಸಿಡಿಸಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮಹಿಪಾಲ್ ಲೋಮ್ರರ್ ಅವರನ್ನು ಆರ್ಸಿಬಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿತ್ತು. ಆದರೆ 18 ಎಸೆತಗಳಲ್ಲಿ 26 ರನ್ ಬಾರಿಸಿ ಲೋಮ್ರರ್ ಕೂಡ ನಿರಾಸೆ ಮೂಡಿಸಿದ್ದರು. ಹಾಗೆಯೇ ಸಿಎಸ್ಕೆ ವಿರುದ್ಧ ಲೋಮ್ರರ್ ಶೂನ್ಯಕ್ಕೆ ಔಟಾಗಿದ್ದರು.
ಪಂಜಾಬ್ ಕಿಂಗ್ಸ್ ವಿರುದ್ಧ ಮತ್ತೆ 3ನೇ ಕ್ರಮಾಂಕದಲ್ಲಿ ಬದಲಾವಣೆ ತಂಡ ಆರ್ಸಿಬಿ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಕಣಕ್ಕಿಳಿಸಿತು. ಆದರೆ ಈ ಪಂದ್ಯದಲ್ಲಿ ಮ್ಯಾಕ್ಸಿ ಶೂನ್ಯಕ್ಕೆ ಔಟಾಗಿದ್ದರು.
ಇದಾದ ಬಳಿಕ 3ನೇ ಕ್ರಮಾಂಕವು ಶಹಬಾಝ್ ಅಹ್ಮದ್ ಪಾಲಾಯಿತು. ರಾಜಸ್ಥಾನ್ ರಾಯಲ್ಸ್ ವಿರುದ್ದ ಒನ್ಡೌನ್ ಬಳಿಕ ಕಣಕ್ಕಿಳಿದ ಶಹಬಾಝ್ ಕಲೆಹಾಕಿದ್ದು ಕೇವಲ 2 ರನ್ ಮಾತ್ರ.
ಇನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಆಡಿದ ಅನೂಜ್ ರಾವತ್ ಕಲೆಹಾಕಿರುವುದು ಕೇವಲ 9 ರನ್ ಮಾತ್ರ.
ಅಂದರೆ ಆರ್ಸಿಬಿ 9 ಪಂದ್ಯಗಳಲ್ಲಿ 6 ಬ್ಯಾಟರ್ಗಳನ್ನು ಕಣಕ್ಕಿಳಿಸಿದರೂ 3ನೇ ಕ್ರಮಾಂಕದ ಸಮಸ್ಯೆಗೆ ಪರಿಹಾರ ಕಾಣಲು ಮಾತ್ರ ಸಾಧ್ಯವಾಗಿಲ್ಲ. ಇಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಯಶಸ್ವಿಯಾದರೂ, ಅವರು ಮೇಲಿನ ಕ್ರಮಾಂಕದಲ್ಲಿ ಆಡಿದರೆ ನಾಲ್ಕನೇ ಸ್ಥಾನದಲ್ಲಿ ಮತ್ತದೇ ಸಮಸ್ಯೆ ಎದುರಾಗಲಿದೆ. ಹೀಗಾಗಿ ಆರ್ಸಿಬಿ ಮ್ಯಾಕ್ಸ್ವೆಲ್ ಅವರನ್ನು 4ನೇ ಕ್ರಮಾಂಕದಲ್ಲಿ ಮುಂದುವರೆಸುತ್ತಿದೆ.
ಇತ್ತ ಮ್ಯಾಕ್ಸ್ವೆಲ್ ಅವರನ್ನು ಹೊರತುಪಡಿಸಿದರೆ, 5 ಬ್ಯಾಟರ್ಗಳು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಕಲೆಹಾಕಿದ ಒಟ್ಟು ಸ್ಕೋರ್ 56 ರನ್ ಮಾತ್ರ. ಆರ್ಸಿಬಿ ಆಟಗಾರರ ಇಂತಹದೊಂದು ಕಳಪೆ ಬ್ಯಾಟಿಂಗ್ ಪ್ರದರ್ಶನ ಇದೀಗ ತಂಡದ ಚಿಂತೆಯನ್ನು ಹೆಚ್ಚಿಸಿದೆ.