- Kannada News Photo gallery Cricket photos KL Rahul has been ruled out of IPL 2023 due to serious thigh injury also likely to miss the World Test Championship final
KL Rahul Injury: ಐಪಿಎಲ್ 2023 ರಿಂದ ಕೆಎಲ್ ರಾಹುಲ್ ಹೊರಕ್ಕೆ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಿಂದಲೂ ಔಟ್?
KL Rahul Ruled Out: ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಗಂಭೀರವಾದ ತೊಡೆಯ ಗಾಯಕ್ಕೆ ಒಳಗಾದ ಕೆಎಲ್ ರಾಹುಲ್ ಐಪಿಎಲ್ 2023 ರಿಂದ ಹೊರಬಿದ್ದಿದ್ದಾರೆ. ಜೊತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೂ ಅನುಮಾನ ಎಂದು ಕ್ರಿಕ್ಬುಝ್ ವರದಿ ಮಾಡಿದೆ.
Updated on:May 05, 2023 | 7:37 AM

ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಹಾಗೂ ಲಖನೌ ಸೂಪರ್ ಜೇಂಟ್ಸ್ ತಂಡದ ನಾಯಕನಾಗಿರುವ ಕೆಎಲ್ ರಾಹುಲ್ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರಬಿದ್ದಿದ್ದಾರೆ. ಇದು ಎಲ್ಎಸ್ಜಿ ತಂಡಕ್ಕೆ ದೊಡ್ಡ ಆಘಾತವಾಗಿದೆ. ಅಲ್ಲದೆ ಭಾರತ ಕ್ರಿಕೆಟ್ ತಂಡಕ್ಕೂ ಹಿನ್ನಡೆ ಆಗಿದೆ.

ಸೋಮವಾರ (ಮೇ 1) ಲಖನೌದ ಏಕಾನಾ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗಂಭೀರವಾದ ತೊಡೆಯ ಗಾಯಕ್ಕೆ ಒಳಗಾದ ರಾಹುಲ್ ಐಪಿಎಲ್ 2023 ರಿಂದ ಹೊರಬಿದ್ದಿದ್ದಾರೆ. ಜೊತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೂ ಅನುಮಾನ ಎಂದು ಕ್ರಿಕ್ಬುಝ್ ವರದಿ ಮಾಡಿದೆ.

ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಕೆಎಲ್ ರಾಹುಲ್ ಗಾಯಗೊಂಡಿದ್ದರು. ಹೀಗಾಗಿ 2ನೇ ಓವರ್ ಬಳಿಕ ಅವರು ಫೀಲ್ಡಿಂಗ್ ಮಾಡಿರಲಿಲ್ಲ. ಅಲ್ಲದೆ 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದರೂ ಓಡುವ ಸ್ಥಿತಿಯಲ್ಲಿರಲಿಲ್ಲ. ಇದೀಗ ತೊಡೆಯ ಗಾಯದ ಕಾರಣ ವೈದ್ಯಕೀಯ ಪರಿಶೀಲನೆಗೆ ಮುಂದಾಗಿದ್ದಾರೆ.

ಈಗಾಗಲೇ ಲಖನೌ ಫ್ರಾಂಚೈಸಿಯನ್ನು ಕೆಎಲ್ ರಾಹುಲ್ ತೊರೆದಿದ್ದು, ಮುಂಬೈಗೆ ತೆರಳಲಿದ್ದಾರೆ. ಅಲ್ಲಿ ತೊಡೆಯ ಗಾಯದ ಸ್ಕ್ಯಾನಿಂಗ್ಗೆ ಒಳಗಾಗಿದ್ದಾರೆ. ಆದರೆ, ಸ್ಕ್ಯಾನಿಂಗ್ ರಿಪೋರ್ಟ್ ಬಗ್ಗೆ ಯಾರೂ ಮಾಹಿತಿ ಹೊರಹಾಕಿಲ್ಲ. ಲಖನೌ ಫ್ರಾಂಚೈಸಿಗೆ ಈ ಬಗ್ಗೆ ಮಾಹಿತಿ ಬಂದಿಲ್ಲ ಎಂದು ಹೇಳಲಾಗಿದೆ.

ಇನ್ನು ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ. 1 ಸ್ಥಾನದಲ್ಲಿರುವ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಜೂನ್ 7 ರಿಂದ 11 ರವರೆಗೆ ಓವಲ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023 ರ ಫೈನಲ್ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಇದರಿಂದಲೂ ರಾಹುಲ್ ಹೊರಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಹುಲ್ ಅವರ ಅನುಪಸ್ಥಿತಿಯಲ್ಲಿ ಲಖನೌದ ಮುಂಬರುವ ಪಂದ್ಯಗಳಲ್ಲಿ ಕೃನಾಲ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ. ಇತ್ತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಿಂದ ರಾಹುಲ್ ಹೊರಬಿದ್ದರೆ ಮಯಾಂಕ್ ಅಗರ್ವಾಲ್ ಅಥವಾ ಇಶಾನ್ ಕಿಶನ್ ಆಯ್ಕೆ ಆಗುವ ಸಾಧ್ಯತೆ ಇದೆ.

ರಾಹುಲ್ ಅವರು ಮಂಡಿರಜ್ಜು ಅಥವಾ ಸೊಂಟದ ಗಾಯದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ. ಅವರ ಚಿಕಿತ್ಸೆಯ ಮೇಲ್ವಿಚಾರಣೆ ಮಾಡುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಗುರುವಾರ ರಾತ್ರಿಯವರೆಗೆ ತಂಡದ ನಿರ್ವಹಣೆ ಸೇರಿದಂತೆ ಸಂಬಂಧಿಸಿದ ಯಾರಿಗೂ ಈ ಬಗ್ಗೆ ಮಾಹಿತಿ ನೀಡಿಲ್ಲ. ಹೀಗಾಗಿ ರಾಹುಲ್ ಅವರ ಗಾಯದ ಪ್ರಮಾಣ ಎಷ್ಟಿದೆ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.
Published On - 7:37 am, Fri, 5 May 23



















