IPL 2023: RCB ತಂಡದಲ್ಲಿ 3 ಬ್ಯಾಟ್ಸ್ಮನ್, ಒಬ್ಬ ಬೌಲರ್ ಮತ್ತು 7 ಫೀಲ್ಡರ್ಗಳು..!
IPL 2023 Kannada: ಆರ್ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಕೆಕೆಆರ್ ವಿರುದ್ಧ ಆಡಲಿದೆ. ಏಪ್ರಿಲ್ 26 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದೊಂದಿಗೆ ಆರ್ಸಿಬಿ ದ್ವಿತಿಯಾರ್ಧ ಶುರು ಮಾಡಲಿದೆ.
Updated on:Apr 24, 2023 | 8:33 PM

IPL 2023: ಈ ಸಲ ಕಪ್ ಕಮ್ದೆ ಎಂಬ ಘೋಷವಾಕ್ಯದೊಂದಿಗೆ ಐಪಿಎಲ್ ಸೀಸನ್ 16 ಅಭಿಯಾನ ಆರಂಭಿಸಿದ್ದ ಆರ್ಸಿಬಿ ತಂಡದ ಲೆಕ್ಕಾಚಾರಗಳು ತಲೆ ಕೆಳಗಾಗುತ್ತಿದೆ. ಏಕೆಂದರೆ ಆಡಿರುವ 7 ಪಂದ್ಯಗಳಲ್ಲಿ ಪಂದ್ಯಗಳಲ್ಲಿ ಆರ್ಸಿಬಿ ಗೆದ್ದಿರುವುದು ಕೇವಲ 4 ಮ್ಯಾಚ್ಗಳಲ್ಲಿ ಮಾತ್ರ. ಆದರೆ ಈ ನಾಲ್ಕು ಪಂದ್ಯಗಳ ಗೆಲುವಿನ ಹಿಂದಿರುವುದು ಕೂಡ ನಾಲ್ವರು ಎಂಬುದು ವಿಶೇಷ.

ಅಂದರೆ ಆರ್ಸಿಬಿ ತಂಡವು 11 ಮಂದಿಯೊಂದಿಗೆ ಕಣಕ್ಕಿಳಿಯುತ್ತಿದ್ದರೂ ತಂಡದ ಗೆಲುವಿನಲ್ಲಿ ಕೊಡುಗೆ ನೀಡುತ್ತಿರುವುದು ಕೇವಲ ನಾಲ್ವರು ಆಟಗಾರರು ಮಾತ್ರ. ಉಳಿದವರು ಕೇವಲ ಫೀಲ್ಡಿಂಗ್ಗೆ ಸೀಮಿತವಾಗುತ್ತಿದ್ದಾರೆ.

ಏಕೆಂದರೆ ಏಳು ಪಂದ್ಯಗಳನ್ನು ಮುಗಿಸಿರುವ ಆರ್ಸಿಬಿ ಬ್ಯಾಟಿಂಗ್ ಲೈನಪ್ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಅವಲಂಭಿಸಿದೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.

ಈ 7 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 279 ರನ್ ಕಲೆಹಾಕಿದರೆ, ಗ್ಲೆನ್ ಮ್ಯಾಕ್ಸ್ವೆಲ್ 253 ರನ್ಗಳಿಸಿದ್ದಾರೆ. ಹಾಗೆಯೇ ಫಾಫ್ ಡುಪ್ಲೆಸಿಸ್ 7 ಪಂದ್ಯಗಳಲ್ಲಿ 405 ರನ್ ಬಾರಿಸಿ ಅಮೋಘ ಪ್ರದರ್ಶನ ನೀಡಿದ್ದಾರೆ. ಈ ಮೂವರನ್ನು ಹೊರತುಪಡಿಸಿದರೆ ಉಳಿದ ಯಾವುದೇ ಬ್ಯಾಟ್ಸ್ಮನ್ 7 ಪಂದ್ಯಗಳಿಂದ 70 ರನ್ ಕೂಡ ಕಲೆಹಾಕಿಲ್ಲ ಎಂಬುದೇ ಅಚ್ಚರಿ.

ದಿನೇಶ್ ಕಾರ್ತಿಕ್ 7 ಪಂದ್ಯಗಳಿಂದ ಒಟ್ಟು 61 ರನ್ಗಳಿಸಿದರೆ, ಶಹಬಾಝ್ ಅಹ್ಮದ್ 40 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇನ್ನು ಮಹಿಪಾಲ್ ಲೋಮ್ರರ್ 5 ಪಂದ್ಯಗಳಿಂದ 41 ರನ್ ಕಲೆಹಾಕಿದರೆ, ಸುಯಶ್ ಪ್ರಭುದೇಸಾಯಿ 3 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 19 ರನ್ ಮಾತ್ರ. ಅಂದರೆ ಇಲ್ಲಿ ಆರ್ಸಿಬಿ ಗೆಲುವಿನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳಿಂದ ಯಾವುದೇ ಕೊಡುಗೆಯಿಲ್ಲ ಎಂಬುದೇ ಸತ್ಯ.

ಇನ್ನು ಬೌಲಿಂಗ್ ವಿಭಾಗದಲ್ಲೂ ಇದೇ ಕಥೆ. ಮೊಹಮ್ಮದ್ ಸಿರಾಜ್ ಅವರನ್ನು ಹೊರತುಪಡಿಸಿದರೆ ಉಳಿದ ಯಾವುದೇ ಬೌಲರ್ಗಳು ಪರಿಣಾಮಕಾರಿಯಾಗುತ್ತಿಲ್ಲ. 7 ಪಂದ್ಯಗಳಿಂದ ಸಿರಾಜ್ ಒಟ್ಟು 13 ವಿಕೆಟ್ ಪಡೆದಿರುವುದು ಬಿಟ್ಟರೆ ಉಳಿದವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ.

ಇನ್ನು ಹರ್ಷಲ್ ಪಟೇಲ್ 10 ವಿಕೆಟ್ ಕಬಳಿಸಿದರೂ ಪ್ರತಿ ಓವರ್ನಲ್ಲಿ 9.77 ಸರಾಸರಿಯಲ್ಲಿ ರನ್ ನೀಡಿದ್ದಾರೆ. ಹಾಗೆಯೇ ಇನ್ನುಳಿದ ಯಾವುದೇ ಬೌಲರ್ 5 ಕ್ಕಿಂತ ಹೆಚ್ಚಿನ ವಿಕೆಟ್ ಕೂಡ ಕಬಳಿಸಿಲ್ಲ ಎಂಬುದೇ ಅಚ್ಚರಿ.

ಅಂದರೆ ಇಲ್ಲಿ ಆರ್ಸಿಬಿ ತಂಡದ ಗೆಲುವಿನಲ್ಲಿ ಬ್ಯಾಟಿಂಗ್ ಮೂಲಕ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಅಮೂಲ್ಯ ಕೊಡುಗೆ ನೀಡುತ್ತಿದ್ದರೆ, ಬೌಲಿಂಗ್ ಮೂಲಕ ಮೊಹಮ್ಮದ್ ಸಿರಾಜ್ ಮಿಂಚುತ್ತಿದ್ದಾರೆ. ಉಳಿದ 7 ಮಂದಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಹ ಪರಿಸ್ಥಿತಿ ತಲೆದೂರಿದೆ.

ಇದೇ ಪರಿಸ್ಥಿತಿ ಮುಂದುವರೆದರೆ ಆರ್ಸಿಬಿ ಮುಂದಿನ ಹಂತಕ್ಕೇರುವುದು ಕೂಡ ಕಷ್ಟಸಾಧ್ಯ. ಏಕೆಂದರೆ ಈ ನಾಲ್ವರಲ್ಲಿ ಇಬ್ಬರು ಕೈ ಕೊಟ್ಟರೂ ಆರ್ಸಿಬಿಗೆ ಸೋಲು ಕಟ್ಟಿಟ್ಟ ಬುತ್ತಿ. ಇದಕ್ಕೆ ಉತ್ತಮ ಉದಾಹರಣೆ ಕೆಕೆಆರ್ ವಿರುದ್ಧದ ಹೀನಾಯ ಸೋಲು. ಹೀಗಾಗಿ ದ್ವಿತಿಯಾರ್ಧದ ಆರಂಭಕ್ಕೂ ಮುನ್ನ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ ಎಚ್ಚೆತ್ತುಕೊಳ್ಳುವುದು ಉತ್ತಮ.
Published On - 8:29 pm, Mon, 24 April 23




