IPL 2023: ಹಿಂದೆಂದೂ ಕಂಡರಿಯದ ಚೇಸಿಂಗ್: ಐಪಿಎಲ್ನಲ್ಲಿ ದಾಖಲೆ ನಿರ್ಮಿಸಿದ ರಿಂಕು ಸಿಂಗ್
Rinku Singh Record: ಯಶ್ ದಯಾಳ್ ಎಸೆದ ಕೊನೆಯ ಓವರ್ನ 5 ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ 5 ಸಿಕ್ಸ್ ಸಿಡಿಸುವ ಮೂಲಕ ರಿಂಕು ಸಿಂಗ್ ಕೆಕೆಆರ್ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.
Updated on: Apr 10, 2023 | 7:15 AM

IPL 2023: ಕೊನೆಯ ಓವರ್ನಲ್ಲಿ 29 ರನ್ಗಳ ಗುರಿ...ಸ್ಟ್ರೈಕ್ನಲ್ಲಿ ಉಮೇಶ್ ಯಾದವ್...ಗೆಲುವಿನ ವಿಶ್ವಾಸದಲ್ಲಿ ಗುಜರಾತ್ ಟೈಟಾನ್ಸ್...ಸೋಲುವ ಭೀತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್...ಯಶ್ ದಯಾಳ್ ಎಸೆದ ಕೊನೆಯ ಓವರ್ನ ಮೊದಲ ಎಸೆತದಲ್ಲಿ ಉಮೇಶ್ ಯಾದವ್ 1 ರನ್ ತೆಗೆದರು....ಆ ಬಳಿಕ ನಡೆದಿದ್ದು ಈಗ ಇತಿಹಾಸ.

ಹೌದು, ಐಪಿಎಲ್ ಇತಿಹಾಸದಲ್ಲೇ ಹಿಂದೆಂದೂ ಕಂಡಿಯರದ ಚೇಸಿಂಗ್ಗೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗಿತ್ತು. ಕೊನೆಯ 5 ಎಸೆತಗಳಲ್ಲಿ 28 ರನ್ಗಳ ಗುರಿಯನ್ನು ರಿಂಕು ಸಿಂಗ್ ನಿರಾಯಾಸವಾಗಿ ಚಚ್ಚಿ ಬಿಸಾಕಿದ್ದರು. ಇದು ಈಗ ಐತಿಹಾಸಿಕ ದಾಖಲೆ ಎಂಬುದು ವಿಶೇಷ.

ಯಶ್ ದಯಾಳ್ ಎಸೆದ ಕೊನೆಯ ಓವರ್ನ 5 ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ 5 ಸಿಕ್ಸ್ ಸಿಡಿಸುವ ಮೂಲಕ ರಿಂಕು ಸಿಂಗ್ ಕೆಕೆಆರ್ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಕೊನೆಯ ಓವರ್ನಲ್ಲಿ ಅತ್ಯಧಿಕ ರನ್ ಬಾರಿಸಿ ಪಂದ್ಯ ಗೆದ್ದ ದಾಖಲೆ ಕೊಲ್ಕತ್ತಾ ನೈಟ್ ರೈಡರ್ಸ್ ಪಾಲಾಯಿತು.

ಇದಕ್ಕೂ ಮುನ್ನ ಈ ದಾಖಲೆ ರೈಸಿಂಗ್ ಪುಣೆ ಜೈಂಟ್ಸ್ ಹೆಸರಿನಲ್ಲಿತ್ತು. 2016 ರಲ್ಲಿ ರೈಸಿಂಗ್ ಪುಣೆ ಜೈಂಟ್ಸ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೊನೆಯ ಓವರ್ನಲ್ಲಿ 23 ರನ್ಗಳನ್ನು ಬಾರಿಸಿ ಗೆದ್ದುಕೊಂಡಿದ್ದು ದಾಖಲೆಯಾಗಿತ್ತು.

ಇದೀಗ ರಿಂಕು ಸಿಂಗ್ ಕೊನೆಯ ಓವರ್ನ 5 ಎಸೆತಗಳಲ್ಲಿ 30 ರನ್ ಬಾರಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ಕೊನೆಯ ಓವರ್ನಲ್ಲಿ 31 ರನ್ ಕಲೆಹಾಕುವ ಮೂಲಕ ಅಂತಿಮ ಓವರ್ನಲ್ಲಿ ಅತೀ ಹೆಚ್ಚು ರನ್ಗಳ ಗುರಿ ಬೆನ್ನತ್ತಿ ಗೆದ್ದ ವಿಶೇಷ ದಾಖಲೆಯನ್ನು ಕೆಕೆಆರ್ ತನ್ನದಾಗಿಸಿಕೊಂಡಿದೆ.

ಇದಲ್ಲದೆ ಐಪಿಎಲ್ನಲ್ಲಿ ಒಂದೇ ಓವರ್ನಲ್ಲಿ 5 ಸಿಕ್ಸ್ ಸಿಡಿಸಿದ ಸಿಕ್ಸರ್ ಸರದಾರರ ಪಟ್ಟಿಗೂ ರಿಂಕು ಸಿಂಗ್ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮುನ್ನ ಕ್ರಿಸ್ ಗೇಲ್, ರಾಹುಲ್ ತೆವಾಠಿಯಾ, ರವೀಂದ್ರ ಜಡೇಜಾ ಮಾತ್ರ ಒಂದೇ ಓವರ್ನಲ್ಲಿ 5 ಸಿಕ್ಸ್ಗಳನ್ನು ಸಿಡಿಸಿದ್ದರು. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ರಿಂಕು ಸಿಂಗ್.

ಹಾಗೆಯೇ ಐಪಿಎಲ್ನ ಕೊನೆಯ ಓವರ್ನಲ್ಲಿ 5 ಸಿಕ್ಸ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ರಿಂಕು ಸಿಂಗ್ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಅಂತಿಮ ಓವರ್ನಲ್ಲಿ ಅಬ್ಬರಿಸುವ ಮೂಲಕ ರಿಂಕು ಸಿಂಗ್ ಇದೀಗ ಹಲವು ದಾಖಲೆಗಳನ್ನು ನಿರ್ಮಿಸಿರುವುದು ವಿಶೇಷ.
























