IPL 2023: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ತಂಡದ ಸ್ಪೋಟಕ ಬ್ಯಾಟ್ಸ್ಮನ್ ವೆಂಕಟೇಶ್ ಅಯ್ಯರ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಇದರೊಂದಿಗೆ ಕೆಕೆಆರ್ ಪರ ಶತಕ ಬಾರಿಸಿದ 2ನೇ ಆಟಗಾರ ಎನಿಸಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಇನಿಂಗ್ಸ್ ಆರಂಭಿಸಿದ ಕೆಕೆಆರ್ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಜಗದೀಸನ್ (0) ಹಾಗು ಗುರ್ಬಾಝ್ (8) ಬೇಗನೆ ನಿರ್ಗಮಿಸಿದ್ದರು. ಈ ಹಂತದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
ಕಣಕ್ಕಿಳಿಯುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ವೆಂಕಟೇಶ್ ಅಯ್ಯರ್ ಮುಂಬೈ ಇಂಡಿಯನ್ಸ್ ಬೌಲರ್ಗಳ ಬೆಂಡೆತ್ತಿದರು. ಅದರಲ್ಲೂ ಮೈದಾನದ ಮೂಲೆ ಮೂಲೆಗೆ ಸಿಕ್ಸ್ ಸಿಡಿಸುವ ಮೂಲಕ ಅಬ್ಬರಿಸಿದರು. ಪರಿಣಾಮ 49 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 5 ಫೋರ್ನೊಂದಿಗೆ ವೆಂಕಟೇಶ್ ಅಯ್ಯರ್ ಭರ್ಜರಿ ಶತಕ ಪೂರೈಸಿದರು.
ಇದರೊಂದಿಗೆ ಕೆಕೆಆರ್ ಪರ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಯನ್ನು ವೆಂಕಟೇಶ್ ಅಯ್ಯರ್ ಬರೆದರು. ಅಷ್ಟೇ ಅಲ್ಲದೆ ಐಪಿಎಲ್ನಲ್ಲಿ 50 ಎಸೆತಗಳ ಒಳಗೆ ಸೆಂಚುರಿ ಸಿಡಿಸಿದ ವಿಶೇಷ ಸಾಧಕರ ಪಟ್ಟಿಗೂ ಸೇರ್ಪಡೆಯಾದರು.
ಅಂತಿಮವಾಗಿ 51 ಎಸೆತಗಳಲ್ಲಿ 9 ಭರ್ಜರಿ ಸಿಕ್ಸ್ ಹಾಗೂ 6 ಫೋರ್ನೊಂದಿಗೆ 104 ರನ್ ಬಾರಿಸಿದ ವೆಂಕಟೇಶ್ ಅಯ್ಯರ್ ವೇಗಿ ರಿಲೇ ಮೆರಿಡಿತ್ಗೆ ವಿಕೆಟ್ ಒಪ್ಪಿಸಿದರು.