IPL 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ರೋಚಕ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಬೃಹತ್ ಮೊತ್ತ ಪೇರಿಸಿತ್ತು.
ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಮೊದಲ ವಿಕೆಟ್ಗೆ 96 ರನ್ಗಳ ಜೊತೆಯಾಟವಾಡಿದ್ದರು. 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಕೊಹ್ಲಿ ಆ ಬಳಿಕ 44 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 4 ಫೋರ್ನೊಂದಿಗೆ 61 ರನ್ ಬಾರಿಸಿ ಔಟಾಗಿದ್ದರು.
ಆದರೆ ಇದೀಗ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಬಗ್ಗೆ ಅಪಸ್ವರ ಕೇಳಿ ಬಂದಿದೆ. ಅದರಲ್ಲೂ ಅತ್ಯುತ್ತಮ ಬ್ಯಾಟಿಂಗ್ ಟ್ರಾಕ್ನಲ್ಲೂ ಕೊಹ್ಲಿ ದಾಖಲೆಗಳಿಗಾಗಿ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ್ದಾರೆ ಎಂದು ಕಮೆಂಟೇಟರ್ ಸೈಮನ್ ಡೌಲ್ ಆರೋಪಿಸಿದ್ದಾರೆ.
ಈ ಪಂದ್ಯದಲ್ಲಿ ನಿಧಾನಗತಿಯ ಆರಂಭದ ಪಡೆದ ಬಳಿಕ ವಿರಾಟ್ ಕೊಹ್ಲಿ ಎರಡನೇ ಓವರ್‌ನಲ್ಲಿ ಸತತ ಸಿಕ್ಸರ್ ಮತ್ತು ಫೋರ್ ಸಿಡಿಸಿದರು. ಅವೇಶ್ ಖಾನ್ ಎಸೆದ 4ನೇ ಓವರ್ನಲ್ಲೂ ಮೂರು ಬೌಂಡರಿ ಬಾರಿಸಿದ್ದರು. ಅಲ್ಲದೆ ಕೃನಾಲ್ ಪಾಂಡ್ಯ ಹಾಗೂ ಮಾರ್ಕ್ವುಡ್ ಎಸೆತಗಳಿಗೂ ಭರ್ಜರಿ ಉತ್ತರ ನೀಡಿದ್ದರು.
ಪವರ್ಪ್ಲೇ ಮುಕ್ತಾಯದ ವೇಳೆಗೆ 42 ರನ್ಗಳಿಸಿದ್ದ ವಿರಾಟ್ ಕೊಹ್ಲಿ ಆ ಬಳಿಕ ಮತ್ತಷ್ಟು ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ ಎಂದು ಸೈಮನ್ ಡೌಲ್ ಚಾಟಿ ಬೀಸಿದ್ದಾರೆ. ಏಕೆಂದರೆ ಕೊಹ್ಲಿ ಮುಂದಿನ 8 ರನ್ಗಳನ್ನು ತೆಗೆದುಕೊಂಡಿದ್ದು ಬರೋಬ್ಬರಿ 10 ಎಸೆತಗಳನ್ನು.
ಅಂದರೆ ಇಲ್ಲಿ ಅರ್ಧಶತಕ ಪೂರೈಸುವ ಸಲುವಾಗಿ ವಿರಾಟ್ ಕೊಹ್ಲಿ 10 ಎಸೆತಗಳಲ್ಲಿ ಕೇವಲ 8 ರನ್ ಕಲೆಹಾಕಿದ್ದಾರೆ. ಕೊಹ್ಲಿ ತಮ್ಮ ವೈಯಕ್ತಿಕ ದಾಖಲೆಗಳಿಗಾಗಿ ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದರು. ಇಂತಹ ಆಟ ಉತ್ತಮ ನಡೆಯಲ್ಲ ಎಂದು ಸೈಮನ್ ಡೌಲ್ ಹೇಳಿದ್ದಾರೆ.
ಇದೀಗ ಸೈಮನ್ ಡೌಲ್ ಅವರ ಹೇಳಿಕೆಗೆ ಪರ ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಕೆಲವರು ಅಂಕಿ ಅಂಶಗಳನ್ನು ಮುಂದಿಟ್ಟು ನ್ಯೂಜಿಲೆಂಡ್ನ ಮಾಜಿ ಆಟಗಾರ ಮಾಡಿರುವ ಆರೋಪವನ್ನು ಒಪ್ಪಿದರೆ, ಮತ್ತೆ ಕೆಲವರು ವಿರಾಟ್ ಕೊಹ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ ಎಂಬ ವಾದವನ್ನು ಮುಂದಿಟ್ಟಿದ್ದಾರೆ.