Updated on: Apr 15, 2023 | 8:29 PM
IPL 2023 RCB vs DC: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಆರ್ಸಿಬಿ ವೇಗಿ ವೈಶಾಕ್ ವಿಜಯಕುಮಾರ್ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ಚೊಚ್ಚಲ ಐಪಿಎಲ್ ಪಂದ್ಯದ ಮೂಲಕ ಎಂಬುದೇ ವಿಶೇಷ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು ವಿರಾಟ್ ಕೊಹ್ಲಿಯ ಅರ್ಧಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 174 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕ ಆಟಗಾರ ಪೃಥ್ವಿ ಶಾ ರನೌಟ್ ಆದರೆ, ಮಿಚೆಲ್ ಮಾರ್ಷ್ ಪಾರ್ನೆಲ್ಗೆ ವಿಕೆಟ್ ಒಪ್ಪಿಸಿದರು. ಇನ್ನು ಯಶ್ ಧುಲ್ ಸಿರಾಜ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆದರು. ಇದಾಗ್ಯೂ ಕ್ರೀಸ್ ಕಚ್ಚಿ ನಿಂತಿದ್ದ ಡೇವಿಡ್ ವಾರ್ನರ್ ವಿಕೆಟ್ ಆರ್ಸಿಬಿ ಪಾಲಿಗೆ ಅತ್ಯಗತ್ಯವಾಗಿತ್ತು.
ಈ ಹಂತದಲ್ಲಿ ಐಪಿಎಲ್ನ ಮೊದಲ ಓವರ್ ಎಸೆಯಲು ಬಂದ ಕನ್ನಡಿಗ ವೈಶಾಕ್ ತಮ್ಮ 4ನೇ ಎಸೆತದಲ್ಲಿ ಡೇವಿಡ್ ವಾರ್ನರ್ ಅವರ ವಿಕೆಟ್ ಪಡೆದರು. ಆನಂತರದ ಓವರ್ಗಳಲ್ಲಿ ಡೇಂಜರಸ್ ಅಕ್ಷರ್ ಪಟೇಲ್ ಹಾಗೂ ಲಲಿತ್ ಯಾದವ್ ವಿಕೆಟ್ ಕಬಳಿಸಿ ಮಿಂಚಿದರು.
ಅಷ್ಟೇ ಅಲ್ಲದೆ ಮೊದಲ ಪಂದ್ಯದಲ್ಲಿ 4 ಓವರ್ಗಳನ್ನು ಎಸೆದು ವೈಶಾಕ್ ವಿಜಯಕುಮಾರ್ ನೀಡಿರುವುದು ಕೇವಲ 20 ರನ್ ಮಾತ್ರ. ಇದರ ಜೊತೆಗೆ 3 ವಿಕೆಟ್ ಪಡೆಯುವ ಮೂಲಕ ದಾಖಲೆ ನಿರ್ಮಿಸಿದರು.
ಅಂದರೆ ಆರ್ಸಿಬಿ ಪರ ಪಾದಾರ್ಪಣೆ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ವೇಗಿ ಎಂಬ ದಾಖಲೆ ವೈಶಾಕ್ ವಿಜಕುಮಾರ್ ಪಾಲಾಗಿದೆ. ಅಲ್ಲದೆ ಮುಂಬರುವ ಪಂದ್ಯಗಳಿಗೂ ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಆರ್ಸಿಬಿ ನೀಡಿದ 175 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 9 ವಿಕೆಟ್ ನಷ್ಟಕ್ಕೆ 151 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಆರ್ಸಿಬಿ ತಂಡವು 23 ರನ್ಗಳ ಭರ್ಜರಿ ಜಯ ಸಾಧಿಸಿತು.