IPL 2023: ಹರ್ಷಲ್ ಪಟೇಲ್ ರನೌಟ್ ಮಾಡಿದ್ದರೂ ಅಂಪೈರ್ ಔಟ್ ನೀಡಿಲ್ಲ ಯಾಕೆ ಗೊತ್ತಾ?
TV9 Web | Updated By: ಝಾಹಿರ್ ಯೂಸುಫ್
Updated on:
Apr 11, 2023 | 8:29 PM
IPL 2023 Kannada: ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ವಿರಾಟ್ ಕೊಹ್ಲಿ (61), ಫಾಫ್ ಡುಪ್ಲೆಸಿಸ್ (79) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ (59) ಅವರ ಅಬ್ಬರದೊಂದಿಗೆ ಆರ್ಸಿಬಿ ತಂಡವು 212 ರನ್ ಕಲೆಹಾಕಿತು.
1 / 11
IPL 2023: ಒಂದು ಪಂದ್ಯ ಹಲವು ನಾಟಕೀಯತೆ...ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯವು ಹೈಡ್ರಾಮಾಗಳಿಗೆ ಸಾಕ್ಷಿಯಾಗಿತ್ತು.
2 / 11
ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ವಿರಾಟ್ ಕೊಹ್ಲಿ (61), ಫಾಫ್ ಡುಪ್ಲೆಸಿಸ್ (79) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ (59) ಅವರ ಅಬ್ಬರದೊಂದಿಗೆ ಆರ್ಸಿಬಿ ತಂಡವು 212 ರನ್ ಕಲೆಹಾಕಿತು.
3 / 11
213 ರನ್ಗಳ ಕಠಿಣ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 23 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯಿನಿಸ್ (65) ಹಾಗೂ ನಿಕೋಲಸ್ ಪೂರನ್ (62) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.
4 / 11
ಪರಿಣಾಮ ಕೊನೆಯ ಓವರ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ಗೆ ಗೆಲ್ಲಲು 5 ರನ್ಗಳ ಅವಶ್ಯಕತೆಯಿತ್ತು. ನಾಯಕ ಫಾಫ್ ಡುಪ್ಲೆಸಿಸ್ ಚೆಂಡನ್ನು ಹರ್ಷಲ್ ಪಟೇಲ್ ಅವರ ಕೈಗಿತ್ತರು. ಮೊದಲ ಎಸೆತದಲ್ಲಿ ಜಯದೇವ್ ಉನಾದ್ಕಟ್ 1 ರನ್ ತೆಗೆದರು. 2ನೇ ಎಸೆತದಲ್ಲಿ ಮಾರ್ಕ್ ವುಡ್ ಬೌಲ್ಡ್. 3ನೇ ಎಸೆತದಲ್ಲಿ ರವಿ ಬಿಷ್ಣೋಯ್ 2 ರನ್ ಕಲೆಹಾಕಿದರು. 4ನೇ ಎಸೆತದಲ್ಲಿ ಮತ್ತೊಂದು ರನ್. ಇನ್ನು ಐದನೇ ಎಸೆತದಲ್ಲಿ ಜಯದೇವ್ ಉನಾದ್ಕಟ್ ಕ್ಯಾಚ್ ನೀಡಿ ಹೊರನಡೆದರು.
5 / 11
ಅಲ್ಲಿಗೆ ಪಂದ್ಯವು 1 ಬಾಲ್ಗೆ 1 ರನ್ಗೆ ಬಂದು ನಿಂತಿತು. ಪಂದ್ಯವನ್ನು ಗೆಲ್ಲಲು ಲಕ್ನೋಗೆ 1 ರನ್ ಅವಶ್ಯಕತೆಯಿದ್ದರೆ, ಇತ್ತ ಕೊನೆಯ ಎಸೆತದಲ್ಲಿ ವಿಕೆಟ್ ಪಡೆದರೆ ಆರ್ಸಿಬಿಗೆ ಪಂದ್ಯವನ್ನು ಟೈ ಮಾಡಿಕೊಳ್ಳಲು ಚಾನ್ಸ್ ಇತ್ತು. ಇದನ್ನು ಮನಗಂಡ ವೇಗಿ ಹರ್ಷಲ್ ಪಟೇಲ್ ಮಂಕಡ್ ರನೌಟ್ ಮಾಡುವ ಪ್ಲ್ಯಾನ್ ರೂಪಿಸಿದ್ದರು.
6 / 11
ಕೊನೆಯ ಎಸೆತವನ್ನು ಎಸೆಯಲು ಹರ್ಷಲ್ ಪಟೇಲ್ ಓಡಿ ಬರುತ್ತಿದ್ದರೆ, ನಾನ್ ಸ್ಟ್ರೈಕ್ನಲ್ಲಿದ್ದ ರವಿ ಬಿಷ್ಣೋಯ್ ಕ್ರೀಸ್ ಬಿಟ್ಟಿದ್ದರು. ಇದನ್ನರಿತ ಹರ್ಷಲ್ ಪಟೇಲ್ ಚೆಂಡನ್ನು ವಿಕೆಟ್ಗೆ ತಾಗಿಸಲು ಯತ್ನಿಸಿದರು. ದುರಾದೃಷ್ಟವಶಾತ್ ಅವರ ಗುರಿ ತಪ್ಪಿತು. ಇದಾಗ್ಯೂ ಕ್ರೀಸ್ ಬಿಟ್ಟು ಮುಂದೆ ಹೋಗಿದ್ದ ಹರ್ಷಲ್ ಪಟೇಲ್ ಅಲ್ಲಿಂದಲೇ ತಿರುಗಿ ವಿಕೆಟ್ಗೆ ಎಸೆದರು. ಅಲ್ಲದೆ ಅಂಪೈರ್ಗೆ ರನೌಟ್ ಮನವಿ ಸಲ್ಲಿಸಿದರು.
7 / 11
ಆದರೆ ಹರ್ಷಲ್ ಪಟೇಲ್ ಅವರ ಮನವಿಯನ್ನು ಫೀಲ್ಡ್ ಅಂಪೈರ್ ನಿರಾಕರಿಸಿದರು. ಅಷ್ಟೇ ಅಲ್ಲದೆ ಮೂರನೇ ಅಂಪೈರ್ ಪರಿಶೀಲನೆಗೂ ಅವಕಾಶ ನೀಡಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಹರ್ಷಲ್ ಪಟೇಲ್ ಮಾಡಿದ ದೊಡ್ಡ ತಪ್ಪು. ಅಂದರೆ ಮಂಕಡ್ ರನೌಟ್ ಮಾಡುವ ಬೌಲರ್ ಸಂಪೂರ್ಣ ಬೌಲಿಂಗ್ ಆ್ಯಕ್ಷನ್ ಮಾಡಿದ ಬಳಿಕ ರನೌಟ್ ಮಾಡುವಂತಿಲ್ಲ.
8 / 11
ಹಾಗೆಯೇ ಕ್ರೀಸ್ ದಾಟಿ ಮುಂದಕ್ಕೆ ಹೋಗಿ ಹಿಂತಿರುಗಿ ಚೆಂಡನ್ನು ವಿಕೆಟ್ಗೆ ಎಸೆದು ನಾನ್ ಸ್ಟ್ರೈಕರ್ ಅನ್ನು ರನೌಟ್ ಮಾಡುವಂತಿಲ್ಲ. ಅಂದರೆ ಇಲ್ಲಿ ಮಂಕಡ್ ರನೌಟ್ ಮಾಡಬೇಕಿದ್ದರೆ ಬೌಲರ್ಗೂ ಒಂದಷ್ಟು ನಿಯಮಗಳಿವೆ.
9 / 11
ಇಲ್ಲಿ ಬೌಲರ್ ತನ್ನ ಬೌಲಿಂಗ್ ಶೈಲಿಯನ್ನು ಪೂರ್ಣಗೊಳಿಸಿದ್ದರೆ ಮಂಕಡ್ ರನೌಟ್ ಮಾಡುವಂತಿಲ್ಲ. ಅಂದರೆ ಸಾಮಾನ್ಯವಾಗಿ ಬೌಲರ್ 90 ಡಿಗ್ರಿಯಲ್ಲಿ ಬೌಲಿಂಗ್ ಮಾಡ್ತಾರೆ. ಈ ವೇಳೆ ಬೌಲಿಂಗ್ ಶೈಲಿಯಲ್ಲಿ ಚೆಂಡು ತೋಳನ್ನು ದಾಟಿ ಮುಂದಕ್ಕೆ ಹೋದ ಬಳಿಕ ಮಂಕಡ್ ರನೌಟ್ ಮಾಡುವಂತಿಲ್ಲ. ಹಾಗೆಯೇ ಕ್ರೀಸ್ ದಾಟಿ ಮುಂದಕ್ಕೆ ಹೋದ ಬಳಿಕ ಅಲ್ಲಿಂದಲೇ ನಿಂತು ವಿಕೆಟ್ಗೆ ಎಸೆದು ರನೌಟ್ ಮಾಡುವಂತಿಲ್ಲ.
10 / 11
ಹರ್ಷಲ್ ಪಟೇಲ್ ಮೊದಲ ಪ್ರಯತ್ನದಲ್ಲೇ ಚೆಂಡನ್ನು ವಿಕೆಟ್ಗೆ ತಾಗಿಸಿದ್ದರೆ ರವಿ ಬಿಷ್ಣೋಯ್ ಔಟ್ ಆಗುತ್ತಿದ್ದರು. ಆದರೆ ಆ ಯತ್ನದಲ್ಲಿ ವಿಫಲರಾಗಿ ಮುಂದಕ್ಕೆ ಹೋಗಿ ಅಲ್ಲಿಂದ ವಿಕೆಟ್ಗೆ ಥ್ರೋ ಮಾಡುವ ಮೂಲಕ ರನೌಟ್ ಮಾಡಿದ್ದರು. ಹೀಗಾಗಿ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು.
11 / 11
ಹರ್ಷಲ್ ಪಟೇಲ್ ಮಾಡಿದ ಈ ಒಂದು ಸಣ್ಣ ಎಡವಟ್ಟಿನಿಂದ ಟೈ ಮಾಡಬಹುದಾಗಿದ್ದ ಪಂದ್ಯದಲ್ಲಿ ಆರ್ಸಿಬಿ ತಂಡವು 1 ವಿಕೆಟ್ನಿಂದ ಸೋಲನುಭವಿಸಿತು.