IPL 2023: ಐಪಿಎಲ್ನ 42ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಯುವ ದಾಂಡಿಗ ಯಶಸ್ವಿ ಜೈಸ್ವಾಲ್ ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ್ದರು. ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಜೈಸ್ವಾಲ್ ಕೇವಲ 53 ಎಸೆತಗಳಲ್ಲಿ ಸೆಂಚುರಿ ಪೂರೈಸಿದ್ದರು.
ಅಲ್ಲದೆ ಅಂತಿಮವಾಗಿ 62 ಎಸೆತಗಳನ್ನು ಎದುರಿಸಿದ್ದ ಯಶಸ್ವಿ ಜೈಸ್ವಾಲ್ 8 ಭರ್ಜರಿ ಸಿಕ್ಸ್ ಹಾಗೂ 16 ಫೋರ್ಗಳೊಂದಿಗೆ 124 ರನ್ ಬಾರಿಸಿ ಔಟಾದರು. ವಿಶೇಷ ಎಂದರೆ ಈ ಭರ್ಜರಿ ಶತಕದೊಂದಿಗೆ ಐಪಿಎಲ್ನಲ್ಲಿ ಸೆಂಚುರಿ ಸಿಡಿಸಿದ ಅತ್ಯಂತ ಕಿರಿಯ ಆಟಗಾರರಲ್ಲಿ ಜೈಸ್ವಾಲ್ ಕೂಡ ಸ್ಥಾನ ಪಡೆದಿದ್ದಾರೆ. ಹಾಗಿದ್ರೆ ಐಪಿಎಲ್ ಇತಿಹಾಸದಲ್ಲೇ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ಗಳು ಯಾರೆಲ್ಲಾ ಎಂದು ನೋಡೋಣ...
1- ಮನೀಷ್ ಪಾಂಡೆ: 2009 ರಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿದ್ದ ಮನೀಷ್ ಪಾಂಡೆ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ವಿಶೇಷ ಎಂದರೆ ಈ ಶತಕ ಬಾರಿಸುವಾಗ ಪಾಂಡೆ ಅವರ ವಯಸ್ಸು ಕೇವಲ 19 ವರ್ಷ 253 ದಿನಗಳು. ಅಂದರೆ ಐಪಿಎಲ್ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರನ ದಾಖಲೆ ಮನೀಷ್ ಪಾಂಡೆ ಹೆಸರಿನಲ್ಲಿದೆ.
2- ರಿಷಭ್ ಪಂತ್: ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವುದು ರಿಷಭ್ ಪಂತ್. 2018 ರಲ್ಲಿ ಎಸ್ಆರ್ಹೆಚ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ರಿಷಭ್ ಪಂತ್ ಶತಕ ಬಾರಿಸಿದ್ದರು. ಈ ವೇಳೆ ಪಂತ್ ಅವರಿಗೆ 20 ವರ್ಷ, 218 ದಿನಗಳಾಗಿತ್ತು.
3- ದೇವದತ್ ಪಡಿಕ್ಕಲ್: 2021 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ಸಿಬಿ ತಂಡದ ಆಟಗಾರನಾಗಿದ್ದ ದೇವದತ್ ಪಡಿಕ್ಕಲ್ ಶತಕ ಬಾರಿಸಿದ್ದರು. ಪಡಿಕ್ಕಲ್ ಈ ಸಾಧನೆ ಮಾಡುವಾಗ ಅವರ ವಯಸ್ಸು 20 ವರ್ಷ ಹಾಗೂ 289 ದಿನಗಳು.
4- ಯಶಸ್ವಿ ಜೈಸ್ವಾಲ್: ಐಪಿಎಲ್ 2023 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಬಾರಿಸಿದ್ದಾರೆ. ಈ ಮೂಲಕ 21 ವರ್ಷ, 123 ದಿನಗಳಲ್ಲಿ ಪ್ರಾಯದಲ್ಲಿ ಸೆಂಚುರಿ ಸಿಡಿಸಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ.
5- ಸಂಜು ಸ್ಯಾಮ್ಸನ್: 2017 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಸಂಜು ಸ್ಯಾಮ್ಸನ್ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಶತಕ ಬಾರಿಸಿದ್ದರು. ಈ ವೇಳೆ ಸ್ಯಾಮ್ಸನ್ ಅವರ ವಯಸ್ಸು 22 ವರ್ಷ 151 ದಿನಗಳು ಮಾತ್ರ.