
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ (MI) ತಂಡಕ್ಕೆ ಹಿನ್ನಡೆಯುಂಟಾಗಿದೆ. ತಂಡದಲ್ಲಿದ್ದ ಪ್ರಮುಖ ವೇಗಿ ದಿಲ್ಶನ್ ಮಧುಶಂಕ (Dilshan Madhushanka) ಐಪಿಎಲ್ನ ಮೊದಲಾರ್ಧದ ಪಂದ್ಯಗಳಿಗೆ ಅಲಭ್ಯರಾಗುವುದು ಖಚಿತವಾಗಿದೆ.

ಬಾಂಗ್ಲಾದೇಶ್ ವಿರುದ್ಧದ ಏಕದಿನ ಸರಣಿ ವೇಳೆ ಶ್ರೀಲಂಕಾದ ಎಡಗೈ ವೇಗಿ ದಿಲ್ಶನ್ ಮಧುಶಂಕ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದು, ಹೀಗಾಗಿ ತವರಿಗೆ ಹಿಂತಿರುಗಿದ್ದಾರೆ. ಅಲ್ಲದೆ ಅವರಿಗೆ ವೈದ್ಯರು ಕೆಲ ಕಾಲ ವಿಶ್ರಾಂತಿ ಸೂಚಿಸಿದ್ದಾರೆ. ಹೀಗಾಗಿ ಸಂಪೂರ್ಣ ಗುಣಮುಖರಾದರೆ ಮಾತ್ರ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಬಾರಿ ಐಪಿಎಲ್ ಹರಾಜಿನಲ್ಲಿ ದಿಲ್ಶನ್ ಮಧುಶಂಕ ಅವರನ್ನು ಮುಂಬೈ ಇಂಡಿಯನ್ಸ್ 4.6 ಕೋಟಿ ರೂ.ಗೆ ಖರೀದಿಸಿತು. ಅತ್ಯುತ್ತಮ ಯುವ ಎಡಗೈ ವೇಗಿಯಾಗಿ ಗುರುತಿಸಿಕೊಂಡಿರುವ ಮಧುಶಂಕ ಜಸ್ಪ್ರೀತ್ ಬುಮ್ರಾಗೆ ಉತ್ತಮ ಸಾಥ್ ನೀಡಲಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ಆದರೀಗ ದಿಲ್ಶನ್ ಮಧುಶಂಕ ಗಾಯಗೊಂಡಿರುವುದು ಮುಂಬೈ ಇಂಡಿಯನ್ಸ್ ಪಾಲಿಗೆ ಹಿನ್ನಡೆಯನ್ನುಂಟು ಮಾಡಲಿದೆ.

ಇನ್ನೊಂದೆಡೆ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. ಸದ್ಯ ಸೂರ್ಯಕುಮಾರ್ ಎನ್ಸಿಎನಲ್ಲಿದ್ದು, ಹೀಗಾಗಿ ಮುಂಬೈ ಇಂಡಿಯನ್ಸ್ ತಂಡದ ಮೊದಲೆರಡು ಪಂದ್ಯಗಳಲ್ಲಿ ಅಲಭ್ಯರಾಗುವ ಸಾಧ್ಯತೆಯಿದೆ.

ಒಟ್ಟಿನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಹೊಸ ಸೀಸನ್ ಆರಂಭಿಸುವ ಇರಾದೆಯಲ್ಲಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಇದೀಗ ಆಟಗಾರರ ಗಾಯದ ಚಿಂತೆಯೇ ಹೊಸ ತಲೆನೋವಾಗಿ ಪರಿಣಮಿಸಿದೆ. ಇದಾಗ್ಯೂ ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಹೇಗೆ ಪ್ರದರ್ಶನ ನೀಡಲಿದೆ ಕಾದು ನೋಡಬೇಕಿದೆ.

ಮುಂಬೈ ಇಂಡಿಯನ್ಸ್ ತಂಡ: ಹಾರ್ದಿಕ್ ಪಾಂಡ್ಯ (ನಾಯಕ) ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಎನ್. ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜೇಸನ್ ಬೆಹ್ರೆಂಡಾರ್ಫ್ ,ರೊಮಾರಿಯೋ ಶೆಫರ್ಡ್, ರೊಮಾರಿಯೋ ಶೆಫರ್ಡ್. ಜೆರಾಲ್ಡ್ ಕೋಟ್ಝಿ , ದಿಲ್ಶನ್ ಮಧುಶಂಕ , ಶ್ರೇಯಸ್ ಗೋಪಾಲ್ , ನುವಾನ್ ತುಷಾರ , ನಮನ್ ಧೀರ್ , ಅನ್ಶುಲ್ ಕಾಂಬೋಜ್ , ಮೊಹಮ್ಮದ್ ನಬಿ, ಶಿವಾಲಿಕ್ ಶರ್ಮಾ.