Updated on: May 26, 2024 | 11:23 PM
ಚೆನ್ನೈನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಫೈನಲ್ ಪಂದ್ಯದಲ್ಲಿ ಹೈದರಾಬಾದ್ ಹೀನಾಯ ಸೋಲನ್ನು ಎದುರಿಸಿದೆ. ಹೀಗಾಗಿ ಎರಡನೇ ಬಾರಿಗೆ ಚಾಂಪಿಯನ್ ಆಗುವ ಅವಕಾಶವನ್ನು ಹೈದರಾಬಾದ್ ಕಳೆದುಕೊಂಡಿದೆ. ಇತ್ತ 8 ವಿಕೆಟ್ಗಳ ಜಯ ಸಾಧಿಸಿದ ಕೆಕೆಆರ್ ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.
ಈ ಫೈನಲ್ ಪಂದ್ಯದ ಮುಕ್ತಾಯದೊಂದಿಗೆ 17ನೇ ಆವೃತ್ತಿಯ ಐಪಿಎಲ್ಗೆ ಅದ್ಧೂರಿ ತೆರೆ ಬಿದ್ದಿದೆ. ಇದರೊಂದಿಗೆ ಬಹುಮಾನದ ವಿವರ ಕೂಡ ಬಹಿರಂಗಗೊಂಡಿದ್ದು, ಮೂರನೇ ಬಾರಿಗೆ ಚಾಂಪಿಯನ್ ಆಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 20 ಕೋಟಿ ರೂ. ಬಹುಮಾನ ಸಿಕ್ಕಿದೆ.
ಇನ್ನು ಫೈನಲ್ ಪಂದ್ಯದಲ್ಲಿ ಸೋತು ರನ್ನರ್ ಅಪ್ ಪಟ್ಟಕ್ಕೆ ತೃಪ್ತಿಪಟ್ಟುಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 13 ಕೋಟಿ ರೂ. ಬಹುಮಾನ ಸಿಗಲಿದೆ.
ಉಳಿದಂತೆ ಮೂರನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡ 7 ಕೋಟಿ ರೂ. ಬಹುಮಾನ ಪಡೆದರೆ, ನಾಲ್ಕನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6.5 ಕೋಟಿ ರೂ. ಬಹುಮಾನ ಸಿಕ್ಕಿದೆ.
ಲೀಗ್ನಲ್ಲಿ ಅಧಿಕ ರನ್ ಬಾರಿಸಿ ಆರೆಂಜ್ ಕ್ಯಾಪ್ ಗೆಲ್ಲುವ ಆಟಗಾರನಿಗೆ 15 ಲಕ್ಷ ರೂ. ಬಹುಮಾನ ಸಿಗಲಿದೆ. ಪ್ರಸ್ತುತ 14 ಪಂದ್ಯಗಳಲ್ಲಿ 741 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಈ ಬಹುಮಾನಕ್ಕೆ ಭಾಜನರಾಗಿದ್ದಾರೆ.
ಹಾಗೆಯೇ ಲೀಗ್ನಲ್ಲಿ ಅಧಿಕ ವಿಕೆಟ್ ಪಡೆದ ವೇಗಿಗೂ 15 ಲಕ್ಷ ರೂ. ಬಹುಮಾನ ಸಿಗಲಿದ್ದು, ಇದೀಗ ಈ ಪಟ್ಟಿಯಲ್ಲಿ 24 ವಿಕೆಟ್ ಉರುಳಿಸಿ ಮೊದಲ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತಂಡದ ವೇಗಿ ಹರ್ಷಲ್ ಪಟೇಲ್ ಈ ಬಹುಮಾನ ಸ್ವೀಕರಿಸಲಿದ್ದಾರೆ.