RCB ಯ ಫೈನಲ್ ಸೋಲು ಕಾಡುತ್ತಲೇ ಇದೆ: ಅನಿಲ್ ಕುಂಬ್ಳೆ
TV9 Web | Updated By: ಝಾಹಿರ್ ಯೂಸುಫ್
Updated on:
Apr 25, 2024 | 12:53 PM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17ರ ನಡುವೆ ಆರ್ಸಿಬಿ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಬಾರಿ ಫೈನಲ್ ಪ್ರವೇಶಿಸಿ ಕಪ್ ಗೆಲ್ಲದಿರುವ ಬಗ್ಗೆ ಕುಂಬ್ಳೆ ಮನಬಿಚ್ಚಿ ಮಾತನಾಡಿದ್ದಾರೆ. ಆ ಸೋಲಿಗೆ ಏನು ಕಾರಣ ಎಂಬುದನ್ನು ಸಹ ವಿವರಿಸಿದ್ದಾರೆ.
1 / 7
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮೂರು ಬಾರಿ ಫೈನಲ್ ಆಡಿದೆ. 2009 ರಲ್ಲಿ ಚೊಚ್ಚಲ ಬಾರಿ ಫೈನಲ್ಗೆ ಎಂಟ್ರಿ ಕೊಟ್ಟಿದ್ದ ಆರ್ಸಿಬಿ ಇದಾದ ಬಳಿಕ 2011 ರಲ್ಲಿ ಅಂತಿಮ ಸುತ್ತಿಗೆ ಪ್ರವೇಶಿಸಿತ್ತು. ಇನ್ನು ಆರ್ಸಿಬಿ ಕೊನೆಯ ಬಾರಿ ಫೈನಲ್ ಆಡಿದ್ದು 2016 ರಲ್ಲಿ. ಇದಾದ ಬಳಿಕ ಒಮ್ಮೆಯೂ ಅಂತಿಮ ಸುತ್ತಿಗೆ ಪ್ರವೇಶಿಸಿಲ್ಲ.
2 / 7
ವಿಶೇಷ ಎಂದರೆ ಆರ್ಸಿಬಿ ತಂಡವು ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದ್ದು ಅನಿಲ್ ಕುಂಬ್ಳೆ ನಾಯಕತ್ವದಲ್ಲಿ. 2009 ರಲ್ಲಿ ಕೆವಿನ್ ಪೀಟರ್ಸನ್ ಅರ್ಧದಲ್ಲೇ ಆರ್ಸಿಬಿ ತಂಡವನ್ನು ತೊರೆದ ಕಾರಣ, ಅನಿಲ್ ಕುಂಬ್ಳೆ ತಂಡವನ್ನು ಮುನ್ನಡೆಸಿದ್ದರು. ಕುಂಬ್ಳೆ ಸಾರಥ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್ಸಿಬಿ ಫೈನಲ್ ಪ್ರವೇಶಿಸಿತ್ತು.
3 / 7
ಆದರೆ ಫೈನಲ್ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಕೇವಲ 6 ರನ್ಗಳಿಂದ ಸೋಲುವ ಮೂಲಕ ಆರ್ಸಿಬಿ ಚೊಚ್ಚಲ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಳ್ಳುವ ಅವಕಾಶವನ್ನು ಕೈ ತಪ್ಪಿಸಿಕೊಂಡಿತು. ಈ ಸೋಲಿನ ನೋವು ಈಗಲೂ ಕಾಡುತ್ತೆ ಎಂದಿದ್ದಾರೆ ಆರ್ಸಿಬಿ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ.
4 / 7
ರವಿಚಂದ್ರನ್ ಅಶ್ವಿನ್ ಅವರ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಭಾಗವಹಿಸಿದ್ದ ಅನಿಲ್ ಕುಂಬ್ಳೆ ಆರ್ಸಿಬಿ ಕುರಿತಾದ ಹಲವು ವಿಚಾರಗಳನ್ನು ಮಾತನಾಡಿದರು. ಈ ವೇಳೆ 2009ರ ಫೈನಲ್ ಸೋಲನ್ನು ಕೂಡ ಮೆಲುಕು ಹಾಕಿದ್ದಾರೆ. ಅಂದು ನಾವು ಗೆಲ್ಲಬೇಕಿತ್ತು. ಆದರೆ ಸಿಕ್ಕ ಅವಕಾಶವನ್ನು ಕೈಚೆಲ್ಲುವ ಮೂಲಕ ಪ್ರಶಸ್ತಿ ಗೆಲ್ಲುವುದನ್ನು ತಪ್ಪಿಸಿಕೊಂಡೆವು ಎಂದು ಕುಂಬ್ಳೆ ಹೇಳಿದ್ದಾರೆ.
5 / 7
2009 ರ ಫೈನಲ್ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ 143 ರನ್ ಬಾರಿಸಿತ್ತು. 144 ರನ್ಗಳ ಗುರಿ ಪಡೆದಿದ್ದ ನಮಗೆ ಕೊನೆಯ ಓವರ್ನಲ್ಲಿ 15 ರನ್ ಬೇಕಿತ್ತು. ಈ ವೇಳೆ ನಾನು (ಕುಂಬ್ಳೆ) ಹಾಗೂ ರಾಬಿನ್ ಉತ್ತಪ್ಪ ಕ್ರೀಸ್ನಲ್ಲಿದ್ದೆವು. ಮೊದಲ ಎಸೆತದಲ್ಲಿ ನಾನು ಒಂದು ರನ್ ಕಲೆಹಾಕಿದೆ. ಆದರೆ 2ನೇ ಮತ್ತು 3ನೇ ಎಸೆತಗಳಲ್ಲಿ ರನ್ ಬಾರಿಸಲು ಉತ್ತಪ್ಪ ವಿಫಲರಾದರು.
6 / 7
ರಾಬಿನ್ ಉತ್ತಪ್ಪಗೆ ನಾನು ಮೊದಲೇ ಹೇಳಿದ್ದೆ. ಆರ್ಪಿ ಸಿಂಗ್ ಸ್ಕೂಪ್ ಮಾಡಲು ಅವಕಾಶ ನೀಡುವುದಿಲ್ಲ. ಲೆಂಗ್ತ್ ಬಾಲ್ ಹಾಕ್ತಾನೆ. ಆದರೆ ಉತ್ತಪ್ಪ ಸ್ಕೂಪ್ ಶಾಟ್ಗೆ ಟ್ರೈ ಮಾಡಿದ್ದರು. ಇನ್ನು 4ನೇ ಎಸೆತದಲ್ಲಿ 2 ರನ್ ಕಲೆಹಾಕಿದರು. 5ನೇ ಎಸೆತದಲ್ಲಿ ಲೆಗ್ ಬೈ ಫೋರ್ ಸಿಕ್ತು. ಆದರೆ ಕೊನೆಯ ಎಸೆತದಲ್ಲಿ 1 ರನ್ ಗಳಿಸಲಷ್ಟೇ ಶಕ್ತರಾದರು.
7 / 7
ನಾವು ಒಂದು ಸಿಕ್ಸ್ ಬಾರಿಸಬೇಕಿತ್ತು. ನಂಗೆ ಆ ಓವರ್ನಲ್ಲಿ ಹೆಚ್ಚಿನ ಅವಕಾಶ ಸಿಕ್ಕಿದ್ದರೆ ಸಿಕ್ಸ್ ಬಾರಿಸಲು ಪ್ರಯತ್ನಿಸುತ್ತಿದ್ದೆ. ಅಂತಿಮವಾಗಿ ನಾವು 6 ರನ್ಗಳಿಂದ ಸೋತೆವು. ಈಗಲೂ ಕೂಡ ನಾನು ರಾಬಿನ್ ಉತ್ತಪ್ಪ ಸಿಕ್ಕಾಗ ಆ ಸಿಕ್ಸ್ ಬಗ್ಗೆ ಹೇಳ್ತೀನಿ. ಆ ಫೈನಲ್ ಸೋಲಿನ ನೋವು ಈಗಲೂ ಕಾಡುತ್ತಿರುತ್ತೆ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.