ಬಹುನಿರೀಕ್ಷಿತ ಕ್ರಿಕೆಟ್ ಕದನ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಶುರುವಾಗಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಸೋಲುಣಿಸಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಶುಭಾರಂಭ ಮಾಡಿದೆ. ವಿಶೇಷ ಎಂದರೆ ಮೊದಲ ಪಂದ್ಯದ ಮುಕ್ತಾಯದ ಬೆನ್ನಲ್ಲೇ ಯೂನಿವರ್ಸ್ ಬಾಸ್ ಕ್ರಿಸ್ ಈ ಬಾರಿ ಪ್ಲೇಆಫ್ ಹಂತಕ್ಕೇರಲಿರುವ ನಾಲ್ಕು ತಂಡಗಳನ್ನು ಹೆಸರಿಸಿದ್ದಾರೆ.
ಕ್ರಿಸ್ ಗೇಲ್ ಪ್ರಕಾರ, ಈ ಸಲ ಆರ್ಸಿಬಿ ತಂಡವು ಪ್ಲೇಆಫ್ ಆಡಲಿರುವುದು ಖಚಿತ. ಬಲಿಷ್ಠ ಬ್ಯಾಟ್ಸ್ಮನ್ಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆಗೆ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದು, ಪ್ಲೇಆಫ್ ಹಂತಕ್ಕೇರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನು ಮುಂಬೈ ಇಂಡಿಯನ್ಸ್ ಕೂಡ ಈ ಬಾರಿ ಪ್ಲೇಆಫ್ ಹಂತಕ್ಕೇರಲಿದೆ ಎಂದಿರುವ ಗೇಲ್, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಪಡೆ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ಹೀಗಾಗಿ ಅಗ್ರ ನಾಲ್ಕರಲ್ಲಿ ಮುಂಬೈ ಇಂಡಿಯನ್ಸ್ ಕೂಡ ಕಾಣಿಸಿಕೊಳ್ಳಲಿದೆ.
ಇದರ ಜೊತೆಗೆ ಸಂಜು ಸ್ಯಾಮ್ಸನ್ ಮುಂದಾಳತ್ವದ ರಾಜಸ್ಥಾನ್ ರಾಯಲ್ಸ್ ಕೂಡ ಟಾಪ್-4 ನಲ್ಲಿ ಕಾಣಿಸಿಕೊಳ್ಳಲಿದೆ. ಕಳೆದ ಕೆಲ ಸೀಸನ್ಗಳಿಂದ ರಾಜಸ್ಥಾನ್ ರಾಯಲ್ಸ್ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಹೀಗಾಗಿ ಆರ್ಆರ್ ತಂಡದ ಕಡೆಯಿಂದಲೂ ಈ ಬಾರಿ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು ಎಂದು ಗೇಲ್ ಹೇಳಿದ್ದಾರೆ.
ಹಾಗೆಯೇ ಟಾಪ್-4 ರಲ್ಲಿ ಕಾಣಿಸಿಕೊಳ್ಳಲಿರುವ ನಾಲ್ಕನೇ ತಂಡವಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಶ್ರೇಯಸ್ ಅಯ್ಯರ್ ಅವರ ಕಂಬ್ಯಾಕ್, ಆ್ಯಂಡ್ರೆ ರಸೆಲ್ ಅವರ ಭರ್ಜರಿ ಫಾರ್ಮ್, ರಿಂಕು ಸಿಂಗ್ ಅವರ ಫಿನಿಶಿಂಗ್ ಕೆಕೆಆರ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಹೀಗಾಗಿ ಕೆಕೆಆರ್ ತಂಡ ಕೂಡ ಪ್ಲೇಆಫ್ ಹಂತಕ್ಕೇರುವುದನ್ನು ಎದುರು ನೋಡಬಹುದು ಎಂದು ಕ್ರಿಸ್ ಗೇಲ್ ತಿಳಿಸಿದ್ದಾರೆ.
ಅಂದರೆ ಕ್ರಿಸ್ ಗೇಲ್ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಪ್ಲೇಆಫ್ ಆಡಲಿದೆ. ಗೇಲ್ ನುಡಿದಿರುವ ಈ ಭವಿಷ್ಯವು ನಿಜವಾಗಲಿದೆಯಾ ಎಂಬುದನ್ನು ಕಾದು ನೋಡೋಣ.