MS Dhoni: 42ನೇ ವಯಸ್ಸಿನಲ್ಲೂ ಧೋನಿ ದಾಖಲೆ..!
IPL 2024 RCB vs CSK: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ 20 ಓವರ್ಗಳಲ್ಲಿ 173 ರನ್ ಕಲೆಹಾಕಿ ಸಿಎಸ್ಕೆ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದ್ದರು. ಆದರೆ ಈ ಗುರಿಯನ್ನು 18.4 ಓವರ್ಗಳಲ್ಲಿ ಚೇಸ್ ಮಾಡಿ ಸಿಎಸ್ಕೆ ತಂಡವು IPL 2024 ರಲ್ಲಿ ಶುಭಾರಂಭ ಮಾಡಿದೆ.
Updated on: Mar 23, 2024 | 8:59 AM

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಆರ್ಸಿಬಿ (RCB) ವಿರುದ್ಧದ ಪಂದ್ಯದ ಮೂಲಕ ಮಹೇಂದ್ರ ಸಿಂಗ್ ಧೋನಿ (MS Dhoni) ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಅದ್ಭುತ ಫೀಲ್ಡಿಂಗ್ ಮೂಲಕ ಎಂಬುದು ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡವು ಮೊದಲು ಬ್ಯಾಟಿಂಗ್ ಮಾಡಿತು.

ಅದರಂತೆ ಭರ್ಜರಿ ಬೌಲಿಂಗ್ ದಾಳಿ ಸಂಘಟಿಸಿದ ಸಿಎಸ್ಕೆ ಬೌಲರ್ಗಳು ಆರ್ಸಿಬಿ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲೂ ಕರಾರುವಾಕ್ ದಾಳಿ ಸಂಘಟಿಸಿದ ಮುಸ್ತಫಿಜುರ್ ರೆಹಮಾನ್ 4 ವಿಕೆಟ್ ಕಬಳಿಸಿ ಮಿಂಚಿದರು. ಇದರಲ್ಲಿ 2 ವಿಕೆಟ್ಗಳು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಹಿಡಿದ ಕ್ಯಾಚ್ನಿಂದ ಮೂಡಿಬಂದಿದ್ದವು.

ಇನ್ನು ಆರ್ಸಿಬಿ ತಂಡದ ಇನಿಂಗ್ಸ್ನ ಕೊನೆಯ ಎಸೆತದಲ್ಲಿ ಅನೂಜ್ ರಾವತ್ ಅವರನ್ನು ಮಹೇಂದ್ರ ಸಿಂಗ್ ಧೋನಿ ರನೌಟ್ ಮಾಡಿದ್ದರು. ಈ ರನೌಟ್ನೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನೌಟ್ ಮಾಡಿದ ಆಟಗಾರ ಎಂಬ ದಾಖಲೆ ಧೋನಿ ಪಾಲಾಗಿದೆ.

ಇದಕ್ಕೂ ಮುನ್ನ ಈ ಅಪರೂಪದ ದಾಖಲೆ ರವೀಂದ್ರ ಜಡೇಜಾ ಅವರ ಹೆಸರಿನಲ್ಲಿತ್ತು. 227 ಐಪಿಎಲ್ ಪಂದ್ಯಗಳನ್ನಾಡಿರುವ ಜಡೇಜಾ ಒಟ್ಟು 23 ರನೌಟ್ಗಳನ್ನು ಮಾಡಿ ಈ ವಿಶೇಷ ದಾಖಲೆ ಬರೆದಿದ್ದರು.

ಇದೀಗ 251ನೇ ಪಂದ್ಯದಲ್ಲಿ ಅನೂಜ್ ರಾವತ್ ಅವರನ್ನು ರನೌಟ್ ಮಾಡುವ ಮೂಲಕ ಧೋನಿ ಈ ದಾಖಲೆ ಮುರಿದಿದ್ದಾರೆ. ಅಲ್ಲದೆ ಐಪಿಎಲ್ನಲ್ಲಿ 24 ರನೌಟ್ ಮಾಡಿ ತಮ್ಮ 42ನೇ ವಯಸ್ಸಿನಲ್ಲೂ ವಿಶೇಷ ದಾಖಲೆ ಬರೆಯುವಲ್ಲಿ ಧೋನಿ ಯಶಸ್ವಿಯಾಗಿದ್ದಾರೆ.

ಇನ್ನು ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ಎಂಬ ದಾಖಲೆ ಕೂಡ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿದೆ. 251 ಪಂದ್ಯಗಳಲ್ಲಿ ಧೋನಿ 140 ಕ್ಯಾಚ್ ಹಾಗೂ 42 ಸ್ಟಂಪಿಂಗ್ ಮಾಡುವ ಮೂಲಕ ಈ ದಾಖಲೆ ಬರೆದಿಟ್ಟಿದ್ದಾರೆ.



















