
ಜೂನ್ 1 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ಗಾಗಿ ಇಂಗ್ಲೆಂಡ್ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಈ ಪ್ರಕಟಣೆಯ ಬೆನ್ನಲ್ಲೇ ಇಂಗ್ಲೆಂಡ್ ಆಟಗಾರರು ಐಪಿಎಲ್ನ ಪ್ಲೇಆಫ್ ಪಂದ್ಯಗಳಿಗೆ ಲಭ್ಯರಿರುವುದಿಲ್ಲ ಎಂಬುದನ್ನು ಇಸಿಬಿ ಸ್ಪಷ್ಟಪಡಿಸಿದೆ.

ಅಂದರೆ ಪ್ರಸ್ತುತ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರರು ಮೇ ಮೂರನೇ ವಾರದೊಳಗೆ ತವರಿಗೆ ಮರಳಲಿದ್ದಾರೆ. ಏಕೆಂದರೆ ಮೇ.22 ರಿಂದ ಇಂಗ್ಲೆಂಡ್ ಮತ್ತು ಪಾಕಿಸ್ತಾನ್ ನಡುವೆ 4 ಪಂದ್ಯಗಳ ಟಿ20 ಸರಣಿ ಶುರುವಾಗಲಿದೆ. ಈ ಸರಣಿಯಲ್ಲಿ ಪ್ರಸ್ತುತ ಆಯ್ಕೆಯಾಗಿರುವ ಎಲ್ಲಾ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

ಹೀಗಾಗಿ ಐಪಿಎಲ್ ತಂಡಗಳಲ್ಲಿರುವ ಇಂಗ್ಲೆಂಡ್ ಆಟಗಾರರು ಪ್ಲೇಆಫ್ ಹಂತದ ಪಂದ್ಯಗಳಿಗೆ ಅಲಭ್ಯರಾಗುವುದು ಖಚಿತ. ಏಕೆಂದರೆ ಪ್ಲೇಆಫ್ ಹಂತದ ಪಂದ್ಯಗಳು ಮೇ 21 ರಿಂದ ಶುರುವಾಗಲಿದೆ. ಇನ್ನು ಐಪಿಎಲ್ ಫೈನಲ್ ಪಂದ್ಯ ಮೇ 26 ರಂದು ನಡೆಯಲಿದೆ. ಹೀಗಾಗಿ ಐಪಿಎಲ್ನ ಅಂತಿಮ ಹಂತದ ಪಂದ್ಯಗಳಲ್ಲಿ ಇಂಗ್ಲೆಂಡ್ನ ಸ್ಟಾರ್ ಆಟಗಾರರು ಕಾಣಿಸಿಕೊಳ್ಳುವುದಿಲ್ಲ.

ಅದರಂತೆ ಮೊಯೀನ್ ಅಲಿ (ಸಿಎಸ್ಕೆ), ಜಾನಿ ಬೈರ್‌ಸ್ಟೋವ್ (ಪಂಜಾಬ್ ಕಿಂಗ್ಸ್), ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್), ಸ್ಯಾಮ್ ಕರನ್ (ಪಂಜಾಬ್ ಕಿಂಗ್ಸ್), ವಿಲ್ ಜಾಕ್ಸ್ (ಆರ್ಸಿಬಿ), ಲಿಯಾಮ್ ಲಿವಿಂಗ್‌ಸ್ಟೋನ್ (ಪಂಜಾಬ್ ಕಿಂಗ್ಸ್), ಫಿಲ್ ಸಾಲ್ಟ್ (ಕೆಕೆಆರ್), ರೀಸ್ ಟೋಪ್ಲಿ (ಆರ್ಸಿಬಿ) ಐಪಿಎಲ್ನ ಪ್ಲೇಆಫ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಟಿ20 ವಿಶ್ವಕಪ್ಗೆ ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ), ಮೊಯೀನ್ ಅಲಿ, ಜೋಫ್ರಾ ಆರ್ಚರ್, ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಬೆನ್ ಡಕೆಟ್, ಟಾಮ್ ಹಾರ್ಟ್ಲಿ, ವಿಲ್ ಜಾಕ್ಸ್, ಕ್ರಿಸ್ ಜೋರ್ಡನ್, ಲಿಯಾಮ್ ಲಿವಿಂಗ್‌ಸ್ಟೋನ್, ಆದಿಲ್ ರಶೀದ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಮಾರ್ಕ್ ವುಡ್.