IPL 2024: ಕಳಪೆ ನಾಯಕತ್ವ: ಹಾರ್ದಿಕ್ ಪಾಂಡ್ಯ ವಿರುದ್ಧ ಟೀಕೆಗಳ ಮಹಾಪೂರ
TV9 Web | Updated By: ಝಾಹಿರ್ ಯೂಸುಫ್
Updated on:
Mar 28, 2024 | 10:53 AM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಗುಜರಾತ್ ಟೈಟಾನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಪರ ನಾಯಕನಾಗಿ ಶುಭಾರಂಭ ಮಾಡಲು ವಿಫಲರಾಗಿದ್ದಾರೆ. ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋತಿದ್ದ ಮುಂಬೈ ಇಂಡಿಯನ್ಸ್ ಇದೀಗ ಎಸ್ಆರ್ಹೆಚ್ ವಿರುದ್ಧ ಕೂಡ ಸೋಲನುಭವಿಸಿದೆ.
1 / 8
ಹೈದರಾಬಾದ್ನಲ್ಲಿ ನಡೆದ IPL 2024ರ 8ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ವಿರುದ್ಧ ಟೀಕೆಗಳ ಕೇಳಿ ಬರಲಾರಂಭಿಸಿದೆ. ಇದಕ್ಕೆ ಮುಖ್ಯ ಕಾರಣ ಅವರ ನಾಯಕತ್ವದ ಗುಣಗಳು.
2 / 8
ಏಕೆಂದರೆ ಎಸ್ಆರ್ಹೆಚ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬೌಲರ್ಗಳು ದುಬಾರಿಯಾಗುತ್ತಿದ್ದರೂ, ಹಾರ್ದಿಕ್ ಜಸ್ಪ್ರೀತ್ ಬುಮ್ರಾ ಅವರನ್ನು ಬಳಸಿಕೊಳ್ಳದಿರುವುದು ಇದೀಗ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
3 / 8
ಸನ್ರೈಸರ್ಸ್ ಹೈದರಾಬಾದ್ ತಂಡವು 11 ಓವರ್ಗಳಲ್ಲಿ 160+ ಸ್ಕೋರ್ಗಳಿಸಿದರೂ ಹಾರ್ದಿಕ್ ಪಾಂಡ್ಯ ಬುಮ್ರಾ ಅವರನ್ನು ಬಳಸಿಕೊಳ್ಳಲೇ ಇಲ್ಲ. ಮೊದಲ ಹನ್ನೊಂದು ಓವರ್ಗಳಲ್ಲಿ ನೀಡಿದ್ದು ಕೇವಲ 1 ಓವರ್ ಮಾತ್ರ. ತಂಡದಲ್ಲಿರುವ ಅತ್ಯುತ್ತಮ ಬೌಲರ್ ಯಾವಾಗ ಬೌಲಿಂಗ್ ಮಾಡಬೇಕೆಂದು ತಿಳಿದಿಲ್ಲವೇ?. ಇದು ಅತ್ಯಂತ ಕಳಪೆ ನಾಯಕತ್ವ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಯೂಸುಫ್ ಪಠಾಣ್ ಟೀಕಿಸಿದ್ದಾರೆ.
4 / 8
ಇನ್ನು ಈ ಬಗ್ಗೆ ಎಕ್ಸ್ ಮಾಡಿರುವ ಆಸ್ಟ್ರೇಲಿಯಾ ಲೆಜೆಂಡ್ ಟಾಮ್ ಮೂಡಿ, ಜಸ್ಪ್ರೀತ್ ಬುಮ್ರಾ ಎಲ್ಲಿದ್ದಾರೆ? ಇಡೀ ಪಂದ್ಯವೇ ಕೈ ತಪ್ಪಿ ಹೋಗುತ್ತಿದ್ದರೂ ಬೆಸ್ಟ್ ಬೌಲರ್ಗೆ ನೀಡಿರುವುದು ಒಂದೇ ಓವರ್. ಇದೆಂತಹ ಕ್ಯಾಪ್ಟನ್ಸಿ ಎಂಬಾರ್ಥದಲ್ಲಿ ಪ್ರಶ್ನಿಸಿದ್ದಾರೆ.
5 / 8
ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿರುವುದು ಅತ್ಯಂತ ಅಚ್ಚರಿಯ ನಡೆ ಎಂದು ಇಂಗ್ಲೆಂಡ್ನ ಮಾಜಿ ನಾಯಕ ಮೈಕೆಲ್ ವಾನ್ ಹೇಳಿದ್ದಾರೆ. ಅದು ಕೂಡ ಹಾರ್ದಿಕ್ ಪಾಂಡ್ಯ ಅವರ ಕಳಪೆ ನಾಯಕತ್ವವನ್ನು ವೀಕ್ಷಿಸಿದ ಬಳಿಕ ಎಂಬುದು ವಿಶೇಷ.
6 / 8
ಎಸ್ಆರ್ಹೆಚ್ ಬ್ಯಾಟರ್ಗಳು ಮುಂಬೈ ಇಂಡಿಯನ್ಸ್ ಬೌಲರ್ಗಳನ್ನು ಸತತವಾಗಿ ಬೆಂಡೆತ್ತುತ್ತಿದ್ದರೂ ಹಾರ್ದಿಕ್ ಪಾಂಡ್ಯ ಜಸ್ಪ್ರೀತ್ ಬುಮ್ರಾ ಅವರನ್ನು ದೂರವಿಟ್ಟಿದ್ದು ಅಚ್ಚರಿಯ ನಡೆ. ಇದು ಹಾರ್ದಿಕ್ ಪಾಂಡ್ಯ ಅವರ ಕನಿಷ್ಠ ನಾಯಕತ್ವದ ಗುಣವನ್ನು ಎತ್ತಿ ತೋರಿಸಿದೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
7 / 8
ಕುತೂಹಲಕಾರಿ ವಿಷಯ ಎಂದರೆ ಹೆನ್ರಿಕ್ ಕ್ಲಾಸೆನ್ ಅವರನ್ನು ಕಟ್ಟಿ ಹಾಕಲು ಹಾರ್ದಿಕ್ ಪಾಂಡ್ಯ ಬುಮ್ರಾಗೆ ಮೊದಲ 10 ಓವರ್ಗಳಲ್ಲಿ ಕೇವಲ 1 ಓವರ್ ಮಾತ್ರ ನೀಡಿದ್ದರು. ಆದರೆ ಕ್ಲಾಸೆನ್ ಬರುವ ಮುಂಚೆಯೇ ಎಸ್ಆರ್ಹೆಚ್ ಬ್ಯಾಟರ್ಗಳು 10 ಓವರ್ಗಳಲ್ಲಿ 148 ರನ್ ಬಾರಿಸಿ ಇತಿಹಾಸ ನಿರ್ಮಿಸಿದರು. ಇದಾಗ್ಯೂ ಹಾರ್ದಿಕ್ ಪಾಂಡ್ಯ ಮಾತ್ರ ಎಚ್ಚರಗೊಂಡಿರಲಿಲ್ಲ ಎಂದು ಮುಂಬೈ ಇಂಡಿಯನ್ಸ್ ಫ್ಯಾನ್ಸ್ ಕೂಡ ಟೀಕಿಸಿದ್ದಾರೆ.
8 / 8
ಒಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಹಾರ್ದಿಕ್ ಪಾಂಡ್ಯ ಅವರ ನಸೀಬು ಸರಿಯಿದ್ದಂತೆ ಕಾಣುತ್ತಿಲ್ಲ. ಒಂದೆಡೆ ರೋಹಿತ್ ಶರ್ಮಾ ಅಭಿಮಾನಿಗಳ ಮೂದಲಿಕೆ, ಮತ್ತೊಂದೆಡೆ ತಲೆಕೆಳಗಾಗುತ್ತಿರುವ ಲೆಕ್ಕಾಚಾರಗಳಿಂದ ಪಾಂಡ್ಯ ಸಂಕಷ್ಟಕ್ಕೆ ಸಿಲುಕಿರುವುದಂತು ಸತ್ಯ.
Published On - 10:53 am, Thu, 28 March 24