IPL 2024: RCB ತಂಡಕ್ಕೆ ಬಿಗ್ ಶಾಕ್: ಸ್ಟಾರ್ ಆಟಗಾರನಿಗೆ ಗಾಯ..!
TV9 Web | Updated By: ಝಾಹಿರ್ ಯೂಸುಫ್
Updated on:
Apr 13, 2024 | 8:08 AM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಇದುವರೆಗೆ 6 ಪಂದ್ಯಗಳನ್ನಾಡಿರುವ ಆರ್ಸಿಬಿ ತಂಡವು ಗೆದ್ದಿರುವುದು ಕೇವಲ 1 ಮ್ಯಾಚ್ನಲ್ಲಿ ಮಾತ್ರ. ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದಿದ್ದು ಬಿಟ್ಟರೆ, ಉಳಿದ 5 ಪಂದ್ಯಗಳಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಗ್ಗರಿಸಿದೆ. ಇನ್ನು ಮೊದಲಾರ್ಧದ ಕೊನೆಯ ಪಂದ್ಯದಲ್ಲಿ ಆರ್ಸಿಬಿ ಎಸ್ಆರ್ಹೆಚ್ ವಿರುದ್ಧ ಕಣಕ್ಕಿಳಿಯಲಿದೆ.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಆರ್ಸಿಬಿ ತಂಡದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಗಾಯಗೊಂಡಿದ್ದಾರೆ.
2 / 6
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಮ್ಯಾಕ್ಸ್ವೆಲ್ ಅವರ ಹೆಬ್ಬೆರಳಿಗೆ ಗಾಯವಾಗಿದ್ದು, ಹೀಗಾಗಿ ಅವರು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ. ಅದರಂತೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕ್ಯಾಮರೋನ್ ಗ್ರೀನ್ ಕಣಕ್ಕಿಳಿಯುವ ಸಾಧ್ಯತೆಯಿದೆ.
3 / 6
ಏಕೆಂದರೆ ಕಳೆದ ಪಂದ್ಯದಲ್ಲಿ ಕ್ಯಾಮರೋನ್ ಗ್ರೀನ್ ಬದಲಿಗೆ ವಿಲ್ ಜಾಕ್ಸ್ ಕಣಕ್ಕಿಳಿದಿದ್ದರು. ಇದೀಗ ಮ್ಯಾಕ್ಸ್ವೆಲ್ ಹೊರಗುಳಿದರೆ ಅವರ ಸ್ಥಾನ ತುಂಬಬಲ್ಲ ಸಮರ್ಥ ಆಟಗಾರ ಆರ್ಸಿಬಿ ತಂಡದಲ್ಲಿಲ್ಲ. ಹೀಗಾಗಿ ಔಟ್ ಆಫ್ ಫಾರ್ಮ್ನಲ್ಲಿರುವ ಗ್ರೀನ್ ಅವರನ್ನೇ ಮತ್ತೆ ಕಣಕ್ಕಿಳಿಸಬೇಕಾದ ಅನಿವಾರ್ಯತೆ ಆರ್ಸಿಬಿ ಮುಂದಿದೆ.
4 / 6
ಇನ್ನು ಈ ಬಾರಿಯ ಐಪಿಎಲ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಆಡಿರುವ 6 ಇನಿಂಗ್ಸ್ಗಳಿಂದ ಮ್ಯಾಕ್ಸಿ ಕಲೆಹಾಕಿದ್ದು ಕೇವಲ 32 ರನ್ಗಳು ಮಾತ್ರ. ಈ ಆರು ಇನಿಂಗ್ಸ್ಗಳಲ್ಲಿ ಅವರು ಕಲೆಹಾಕಿದ ಗರಿಷ್ಠ ಸ್ಕೋರ್ 28 ರನ್ಗಳು. ಇನ್ನುಳಿದ 5 ಇನಿಂಗ್ಸ್ಗಳಲ್ಲಿ ಕ್ರಮವಾಗಿ 0,1,0,3,0 ಗೆ ವಿಕೆಟ್ ಒಪ್ಪಿಸಿದ್ದಾರೆ.
5 / 6
ಇದಾಗ್ಯೂ ನಿರ್ಣಾಯಕ ಪಂದ್ಯಗಳ ವೇಳೆ ಮ್ಯಾಕ್ಸ್ವೆಲ್ ಫಾರ್ಮ್ಗೆ ಮರಳುವ ನಿರೀಕ್ಷೆಯಿತ್ತು. ಆದರೀಗ ಸೋಲಿನ ಸಂಕೋಲೆಯಿಂದ ಪಾರಾಗುವ ಪ್ರಯತ್ನದಲ್ಲಿರುವ ಆರ್ಸಿಬಿಗೆ ಮ್ಯಾಕ್ಸ್ವೆಲ್ ಅವರ ಗಾಯವು ಹೊಸ ಚಿಂತೆಯನ್ನು ಉಂಟು ಮಾಡಿದೆ. ಒಟ್ಟಿನಲ್ಲಿ ಮೊದಲಾರ್ಧದ ಕೊನೆಯ ಪಂದ್ಯಗಳ ವೇಳೆ ಅನುಭವಿ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಗಾಯಗೊಂಡಿರುವುದು ಆರ್ಸಿಬಿ ಪಾಲಿಗೆ ಹಿನ್ನಡೆಯನ್ನುಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ.
6 / 6
ಆರ್ಸಿಬಿ ತನ್ನ ಮುಂದಿನ ಪಂದ್ಯವನ್ನು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಏಪ್ರಿಲ್ 15 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಲಯಕ್ಕೆ ಮರಳಲಿದೆಯಾ ಕಾದು ನೋಡಬೇಕಿದೆ.