
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17ರ ಮೂಲಕ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಪಾದಾರ್ಪಣೆ ಮಾಡಿರುವ ಹಾರ್ದಿಕ್ ಪಾಂಡ್ಯಗೆ (Hardik Pandya) ಆರಂಭದಲ್ಲೇ ವಿಘ್ನಗಳು ಎದುರಾಗಿದೆ. ಒಂದೆಡೆ ತಂಡ ಸೋಲುತ್ತಿದ್ದರೆ, ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಂದಲೇ ಗೇಲಿಗೀಡಾಗುತ್ತಿದ್ದಾರೆ.

ಅದರಲ್ಲೂ ಹ್ಯಾಟ್ರಿಕ್ ಸೋಲುಗಳಿಂದ ಕಂಗೆಟ್ಟಿರುವ ಹಾರ್ದಿಕ್ ಪಾಂಡ್ಯ ಇದೀಗ ದೇವರ ಮೊರೆ ಹೋಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಬಿಡುವು ಪಡೆದುಕೊಂಡಿರುವ ಪಾಂಡ್ಯ ಗುಜರಾತ್ಗೆ ತೆರಳಿದ್ದಾರೆ. ಅಲ್ಲದೆ ಇದೇ ವೇಳೆ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ ಹಾರ್ದಿಕ್ ಪಾಂಡ್ಯ ಶಿವ ಪೂಜೆ ಸಲ್ಲಿಸಿದ್ದು, ಈ ವೇಳೆ ಹಾಲಿನ ಅಭಿಷೇಕ ನೆರವೇರಿಸಿ, ಸ್ಲೋಕಗಳನ್ನು ಪಠಿಸಿದರು. ಅಲ್ಲದೆ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದೀಗ ಪಾಂಡ್ಯ ಅವರ ಪೂಜಾ ವಿಧಿ ವಿಧಾನದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸದ್ಯ ಸಂಕಷ್ಟಕ್ಕೆ ಸಿಲುಕಿರುವ ಹಾರ್ದಿಕ್ ಪಾಂಡ್ಯ ಭಗವಾನ್ ಶಿವನ ಮೊರೆ ಹೋಗಿದ್ದು, ಈ ಮೂಲಕ ಯಶಸ್ಸಿನ ಹಾದಿಗೆ ಮರಳುವ ವಿಶ್ವಾಸದಲ್ಲಿದ್ದಾರೆ. ಅದರಂತೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹೊಸ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಏಪ್ರಿಲ್ 7 ರಂದು ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯದ ಮೂಲಕ ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿದೆ ಹಾರ್ದಿಕ್ ಪಾಂಡ್ಯ ಪಡೆ.