ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಇತಿಹಾಸದಲ್ಲಿ ಅತ್ಯಧಿಕ ಶತಕ ಬಾರಿಸಿದ ದಾಖಲೆ ವಿರಾಟ್ ಕೊಹ್ಲಿ (Virat Kohli) ಹೆಸರಿನಲ್ಲಿದೆ. ಇನ್ನು ಐಪಿಎಲ್ನಲ್ಲಿ ವೇಗದ ಸೆಂಚುರಿ ಸಿಡಿಸಿದ ರೆಕಾರ್ಡ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಈ ಎರಡು ಶತಕಗಳ ದಾಖಲೆಯ ಹೊರತಾಗಿ ಇದೀಗ ಜೋಸ್ ಬಟ್ಲರ್ (Jos Buttler) ಐಪಿಎಲ್ನಲ್ಲಿ ಭರ್ಜರಿ ದಾಖಲೆ ಬರೆದಿದ್ದಾರೆ. ಅದು ಸಹ ಕಿಂಗ್ ಕೊಹ್ಲಿ-ಕ್ರೀಸ್ ಗೇಲ್ ಅವರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.
ಅಂದರೆ ಐಪಿಎಲ್ ಇತಿಹಾಸದಲ್ಲಿ ಶತಕ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟ ವಿಶೇಷ ದಾಖಲೆಯೊಂದು ಜೋಸ್ ಬಟ್ಲರ್ ಹೆಸರಿಗೆ ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು.
ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಐಪಿಎಲ್ನಲ್ಲಿ 6 ಶತಕಗಳನ್ನು ಬಾರಿಸಿದ್ದಾರೆ. ಗೇಲ್ ಶತಕ ಸಿಡಿಸಿದ ಎಲ್ಲಾ ಪಂದ್ಯಗಳಲ್ಲೂ ಆರ್ಸಿಬಿ/ಪಂಜಾಬ್ ಕಿಂಗ್ಸ್ ಜಯ ಸಾಧಿಸಿದೆ.
ಇನ್ನು ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ 8 ಶತಕಗಳನ್ನು ಸಿಡಿಸಿದ್ದಾರೆ. ಈ ವೇಳೆ ಐದು ಪಂದ್ಯಗಳಲ್ಲಿ ಮಾತ್ರ ಆರ್ಸಿಬಿ ಗೆದ್ದಿದೆ. ಅಂದರೆ ಕೊಹ್ಲಿ ಸೆಂಚುರಿ ಬಾರಿಸಿದಾಗ ಆರ್ಸಿಬಿ ತಂಡ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆ.
ಇದೀಗ ಜೋಸ್ ಬಟ್ಲರ್ ಐಪಿಎಲ್ನಲ್ಲಿ 7ನೇ ಬಾರಿ ಶತಕ ಬಾರಿಸಿದ್ದಾರೆ. ವಿಶೇಷ ಎಂದರೆ ಬಟ್ಲರ್ ಸೆಂಚುರಿ ಸಿಡಿಸಿದಾಗ ರಾಜಸ್ಥಾನ್ ರಾಯಲ್ಸ್ ತಂಡವು ಒಮ್ಮೆಯೂ ಸೋತಿಲ್ಲ. ಅಂದರೆ ಐಪಿಎಲ್ ಇತಿಹಾಸದಲ್ಲಿ ಶತಕ ಸಿಡಿಸಿ ಅತೀ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಆಟಗಾರ ಎಂಬ ಹೆಗ್ಗಳಿಕೆಗೆ ಜೋಸ್ ಬಟ್ಲರ್ ಪಾತ್ರರಾಗಿದ್ದಾರೆ.
ಇದೀಗ 7 ಶತಕಗಳೊಂದಿಗೆ ಐಪಿಎಲ್ ಸೆಂಚುರಿ ಸರದಾರರ ಪಟ್ಟಿಯಲ್ಲಿ ಜೋಸ್ ಬಟ್ಲರ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಬಟ್ಲರ್ ಬ್ಯಾಟ್ನಿಂದ ಇನ್ನೊಂದು ಶತಕ ಮೂಡಿಬಂದರೆ ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ವಿಶೇಷ ದಾಖಲೆಯನ್ನು ಸರಿಗಟ್ಟಬಹುದು. ಹೀಗಾಗಿ ಈ ಬಾರಿಯ ಐಪಿಎಲ್ ಮೂಲಕ ಕಿಂಗ್ ಕೊಹ್ಲಿ ಹೆಸರಿನಲ್ಲಿರುವ ಸೆಂಚುರಿ ದಾಖಲೆಯನ್ನು ಜೋಸ್ ಬಟ್ಲರ್ ಸರಿಗಟ್ಟಲಿದ್ದಾರಾ ಕಾದು ನೋಡಬೇಕಿದೆ.