
ಐಪಿಎಲ್ ಸೀಸನ್ 17ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಲಿದೆ. ಕ್ವಾಲಿಫೈಯರ್ಗೆ ಪ್ರವೇಶಿಸಲು ನಿರ್ಣಾಯಕವಾಗಿರುವ ಈ ಪಂದ್ಯದಲ್ಲಿ ಸೋಲುವ ತಂಡ ಐಪಿಎಲ್ನಿಂದ ಹೊರಬೀಳಲಿದೆ. ಹೀಗಾಗಿ ಉಭಯ ತಂಡಗಳಿಗೂ ಈ ಮ್ಯಾಚ್ ಮಾಡು ಇಲ್ಲವೇ ಮಡಿ ಪಂದ್ಯ.

ಇಂತಹ ನಿರ್ಣಾಯಕ ಪಂದ್ಯಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ ಅಲಭ್ಯರಾಗಿದ್ದಾರೆ. ಪಾಕಿಸ್ತಾನ್ ವಿರುದ್ಧದ ಟಿ20 ಸರಣಿಗೆ ಬಟ್ಲರ್ ಇಂಗ್ಲೆಂಡ್ಗೆ ತೆರಳಿದ್ದು, ಹೀಗಾಗಿ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ.

ಇತ್ತ ಜೋಸ್ ಬಟ್ಲರ್ ಅಲಭ್ಯತೆಯು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹೊಸ ಚಿಂತೆಯನ್ನುಂಟು ಮಾಡಿದರೆ, ಆರ್ಸಿಬಿ ತಂಡವು ನಿಟ್ಟುಸಿರುವ ಬಿಟ್ಟಿದೆ. ಏಕೆಂದರೆ ಲೀಗ್ ಹಂತದಲ್ಲಿ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಆರ್ಆರ್ ಗೆಲುವು ದಾಖಲಿಸಿತ್ತು. ಈ ಗೆಲುವಿನ ರೂವಾರಿ ಜೋಸ್ ಬಟ್ಲರ್.

ಈ ಪಂದ್ಯದಲ್ಲಿ ಆರ್ಸಿಬಿ ನೀಡಿದ 183 ರನ್ಗಳನ್ನು ಬೆನ್ನತ್ತಿದ ರಾಜಸ್ಥಾನ್ ಪರ ಜೋಸ್ ಬಟ್ಲರ್ ಅಜೇಯ ಶತಕ ಸಿಡಿಸಿದ್ದರು. ಈ ಶತಕದೊಂದಿಗೆ ಕೊನೆಯ ಓವರ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಇದೀಗ ನಿರ್ಣಾಯಕ ಪಂದ್ಯದಿಂದ ಬಟ್ಲರ್ ಹೊರಗುಳಿದಿರುವುದು ಆರ್ಸಿಬಿ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದೆ.

ಅದರಂತೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬಗ್ಗು ಬಡಿದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2ನೇ ಕ್ವಾಲಿಫೈಯರ್ ಹಂತಕ್ಕೇರುವ ವಿಶ್ವಾಸದಲ್ಲಿದೆ. ಒಂದು ವೇಳೆ ಆರ್ಸಿಬಿ ತಂಡ 2ನೇ ಕ್ವಾಲಿಫೈಯರ್ಗೆ ಪ್ರವೇಶಿಸಿದರೆ, ಕೆಕೆಆರ್ ಮತ್ತು ಎಸ್ಆರ್ಹೆಚ್ ನಡುವಣ ಪಂದ್ಯದಲ್ಲಿ ಸೋಲುವ ತಂಡದ ವಿರುದ್ಧ ಕಣಕ್ಕಿಳಿಯಲಿದೆ.