ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) ಹೊಸ ಫಿನಿಶರ್ ಅವೇಶ್ ಖಾನ್... ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ರೋಚಕ ಗೆಲುವು ದಾಖಲಿಸುತ್ತಿದ್ದಂತೆ ಇತ್ತ ಅವೇಶ್ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದರು. ಅದು ಕೂಡ ಐಪಿಎಲ್ನ ಹೊಸ ಫಿನಿಶರ್ ಎಂಬ ಟ್ಯಾಗ್ಲೈನ್ನೊಂದಿಗೆ ಎಂಬುದು ವಿಶೇಷ.
ಅಷ್ಟಕ್ಕೂ ಅವೇಶ್ ಖಾನ್ ಅವರನ್ನು ಈ ರೀತಿಯಲ್ಲಿ ಟ್ರೋಲ್ ಮಾಡಲು ಮುಖ್ಯ ಕಾರಣ, ಅವರು 2 ರಣರೋಚಕ ಪಂದ್ಯಗಳ ಗೆಲುವಿನ ಭಾಗವಾಗಿರುವುದು. ಅದು ಕೂಡ 0 ರನ್ಗಳೊಂದಿಗೆ ಎಂಬುದು ಇಲ್ಲಿ ಮತ್ತೊಂದು ವಿಶೇಷ.
ಅಂದರೆ ಐಪಿಎಲ್ 2023 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದ ಅವೇಶ್ ಖಾನ್, ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 1 ಬೈಸ್ ರನ್ ಓಡುವ ಮೂಲಕ LSG ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದರು. ಈ ಗೆಲುವಿನ ಬೆನ್ನಲ್ಲೇ ಹೆಲ್ಮೆಟ್ ಎಸೆದು ಸಂಭ್ರಮಿಸಿ ಸಖತ್ ಟ್ರೋಲ್ ಆಗಿದ್ದರು.
ಇದೀಗ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಅವೇಶ್ ಖಾನ್, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಆರ್ ತಂಡ ರೋಚಕ ಗೆಲುವು ದಾಖಲಿಸುವಾಗ ಸಖತ್ ಆಗಿ ಸಂಭ್ರಮಿಸಿದ್ದಾರೆ. ಇಲ್ಲಿ ಇಂಟ್ರೆಸ್ಟಿಂಗ್ ವಿಷಯ ಎಂದರೆ 17.3 ಓವರ್ ವೇಳೆ ಕ್ರೀಸ್ಗೆ ಆಗಮಿಸಿದ ಅವೇಶ್ ಖಾನ್ ಒಂದೇ ಒಂದು ಬಾಲ್ ಅನ್ನು ಎದುರಿಸಿಲ್ಲ ಎಂಬುದು.
ಅಂದರೆ ಕೊನೆಯ ಮೂರು ಓವರ್ಗಳಲ್ಲಿ ಜೋಸ್ ಬಟ್ಲರ್ ಸ್ಟ್ರೈಕ್ ಬದಲಿಸಿರಲಿಲ್ಲ. ಈ ಮೂಲಕ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಇತ್ತ 18ನೇ ಓವರ್ ವೇಳೆ ಕ್ರೀಸ್ಗೆ ಆಗಮಿಸಿದರೂ ಒಂದೆಡೆ ನಿಂತ ಅವೇಶ್ ಖಾನ್ ಅಜೇಯ ಶೂನ್ಯದೊಂದಿಗೆ ಮರಳಿದ್ದರು.
ಇದರ ನಡುವೆ ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವನ್ನು ಸಖತ್ತಾಗಿ ಸಂಭ್ರಮಿಸಿದ ಅವೇಶ್ ಖಾನ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ನೈಸ್ ಆಗಿ ಟ್ರೋಲ್ ಮಾಡಿದೆ. 2023 ರಲ್ಲಿ 0, 2024 ರಲ್ಲೂ 0.. ಅವೇಶ್ ಖಾನ್ ದಿ ಫಿನಿಶರ್ ಎಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ LSG ತನ್ನ ಮಾಜಿ ಆಟಗಾರನ ಕಾಲೆಳೆದಿದೆ. ಇದೀಗ ಈ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದ್ದು, ಅವೇಶ್ ಖಾನ್ ದಿ ಫಿನಿಶರ್ ಎಂದು ಆರ್ಆರ್ ತಂಡದ ಆಟಗಾರನನ್ನು ಟ್ರೋಲ್ ಮಾಡಲಾಗುತ್ತಿದೆ.