
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 17ನೇ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಮುಸ್ತಫಿಜುರ್ ರೆಹಮಾನ್ ಅರ್ಧದಲ್ಲೇ ತವರಿಗೆ ಹಿಂತಿರುಗಿದ್ದಾರೆ.

ಹೀಗಾಗಿ ಏಪ್ರಿಲ್ 5 ರಂದು ನಡೆಯಲಿರುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಮುಸ್ತಫಿಜುರ್ ರೆಹಮಾನ್ ಅಲಭ್ಯರಾಗಲಿದ್ದಾರೆ. ಇದಾದ ಬಳಿಕ ಸಿಎಸ್ಕೆ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 8 ರಂದು ಆಡಲಿದ್ದು, ಈ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಎದುರಿಸಲಿದೆ. ಈ ವೇಳೆಗೆ ಅವರು ತಂಡವನ್ನು ಕೂಡಿಕೊಳ್ಳಲಿದ್ದಾರಾ ಎಂಬುದರ ಬಗ್ಗೆ ಕೂಡ ಸ್ಪಷ್ಟನೆ ಇಲ್ಲ.

ಏಕೆಂದರೆ ಮುಸ್ತಫಿಜುರ್ ರೆಹಮಾನ್ ಸಿಎಸ್ಕೆ ತಂಡವನ್ನು ತೊರೆದಿರುವುದು ವೀಸಾ ಸಂಬಂಧಿಸಿದ ಕೆಲಸಕ್ಕಾಗಿ ಎಂದು ತಿಳಿದು ಬಂದಿದೆ. ಮುಂಬರುವ T20 ವಿಶ್ವಕಪ್‌ಗಾಗಿ ಯುಎಸ್ಎ ವೀಸಾ ಪಡೆಯಬೇಕಿದ್ದು, ಹೀಗಾಗಿ ಅವರು ಬಾಂಗ್ಲಾದೇಶ್ಗೆ ತೆರಳಿದ್ದಾರೆ.

ಇನ್ನು ಈ ಕೆಲಸ ಕಾರ್ಯಗಳು ಮುಗಿದ ಬಳಿಕವಷ್ಟೇ ಭಾರತಕ್ಕೆ ಮರಳಲಿದ್ದಾರೆ. ಹೀಗಾಗಿ ಮುಸ್ತಫಿಜುರ್ ರೆಹಮಾನ್ ಯಾವಾಗ ಸಿಎಸ್ಕೆ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಇದಾಗ್ಯೂ ಏಪ್ರಿಲ್ 14 ರೊಳಗೆ ಹಿಂತಿರುಗಿದರೆ ಮಾತ್ರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಬಹುದು.

ಈ ಬಾರಿಯ ಐಪಿಎಲ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಮುಸ್ತಫಿಜುರ್ ರೆಹಮಾನ್ ಅಗ್ರಸ್ಥಾನದಲ್ಲಿದ್ದಾರೆ. ಸಿಎಸ್ಕೆ ಪರ ಇದೇ ಮೊದಲ ಬಾರಿಗೆ ಕಣಕ್ಕಿಳಿದಿರುವ ಫಿಜ್ 3 ಪಂದ್ಯಗಳಿಂದ ಒಟ್ಟು 7 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಇನ್ನು ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಮುಸ್ತಫಿಜುರ್ ರೆಹಮಾನ್ ಅಲಭ್ಯರಾಗಲಿದ್ದು, ಅವರ ಬದಲಿಗೆ ಮೊಯೀನ್ ಅಲಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಸಿಗಬಹುದು.