
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) ಆರಂಭದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಲೆಕ್ಕಾಚಾರಗಳು ತಲೆಕೆಳಗಾಗುವಂತೆ ಕಾಣುತ್ತಿದೆ. ಇದಕ್ಕೆ ಮುಖ್ಯ ಕಾರಣ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೀನಾಯವಾಗಿ ಸೋತಿರುವುದು. ಅಂದರೆ ತವರು ಮೈದಾನದಲ್ಲೇ ಆರ್ಸಿಬಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ.

ಇದೇ ಕಾರಣದಿಂದಾಗಿ ಇದೀಗ ಈ ಬೌಲರ್ಗಳನ್ನು ಇಟ್ಟುಕೊಂಡು ಈ ಬಾರಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್.

ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಪವರ್ಪ್ಲೇನಲ್ಲೇ 85 ರನ್ಗಳನ್ನು ಬಿಟ್ಟುಕೊಟ್ಟಿದ್ದರು. ಅಲ್ಲದೆ 183 ರನ್ಗಳ ಗುರಿಯನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕೇವಲ 16.5 ಓವರ್ಗಳಲ್ಲಿ ಚೇಸ್ ಮಾಡಿದ್ದರು. ಇಂತಹದೊಂದು ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ ಬೆನ್ನಲ್ಲೇ ಮೈಕೆಲ್ ವಾನ್, ಈ ಸಲ ಕೂಡ ಆರ್ಸಿಬಿ ಕಪ್ ಗೆಲ್ಲುವುದು ಅಸಾಧ್ಯ ಎಂದಿದ್ದಾರೆ.

ಏಕೆಂದರೆ ಆರ್ಸಿಬಿ ತಂಡವು ಉತ್ತಮ ಬೌಲರ್ಗಳನ್ನು ಹೊಂದಿಲ್ಲ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ವಿಜಯಕುಮಾರ್ ವೈಶಾಕ್ ಅವರನ್ನು ಹೊರತುಪಡಿಸಿದರೆ, ಉಳಿದೆಲ್ಲರೂ ದುಬಾರಿಯಾಗಿದ್ದರು. ಇಂತಹ ಬೌಲಿಂಗ್ ಲೈನಪ್ನೊಂದಿಗೆ ಕಣಕ್ಕಿಳಿದರೆ ಆರ್ಸಿಬಿ ಗೆಲ್ಲುವುದೇ ಕಷ್ಟ, ಅಂತಹದ್ರಲ್ಲಿ ಕಪ್ ಗೆಲ್ಲುವುದನ್ನು ನಿರೀಕ್ಷಿಸಬಾರದು ಎಂದು ವಾನ್ ಹೇಳಿದ್ದಾರೆ.

ಒಂದಾರ್ಥದಲ್ಲಿ ಮೈಕೆಲ್ ವಾನ್ ಹೇಳಿರುವುದು ಕೂಡ ನಿಜ ಎಂದೇ ಹೇಳಬಹುದು. ಏಕೆಂದರೆ ಮೊದಲ ಪಂದ್ಯದಲ್ಲಿ ಆರ್ಸಿಬಿ ನೀಡಿದ 174 ರನ್ಗಳನ್ನು ಸಿಎಸ್ಕೆ ತಂಡ 18.4 ಓವರ್ಗಳಲ್ಲಿ ಚೇಸ್ ಮಾಡಿತ್ತು. ಇನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ ಬೌಲರ್ಗಳು 176 ರನ್ ಬಿಟ್ಟುಕೊಟ್ಟಿದ್ದರು.

ಇದೀಗ ಕೆಕೆಆರ್ ಕೂಡ ಆರ್ಸಿಬಿ ಬೌಲರ್ಗಳ ವಿರುದ್ಧ ಪರಾಕ್ರಮ ಮರೆದಿದ್ದಾರೆ. ಹೀಗಾಗಿಯೇ ಮೈಕೆಲ್ ವಾನ್, ಆರ್ಸಿಬಿ ತಂಡವು ಇಂತಹ ಬೌಲಿಂಗ್ನಿಂದ ಕಪ್ ಗೆಲ್ಲಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದ್ದಾರೆ.

RCB ತಂಡವು ತನ್ನ ಮುಂದಿನ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ. ಏಪ್ರಿಲ್ 2 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ವೇಳೆ ಆರ್ಸಿಬಿ ತನ್ನ ಬೌಲಿಂಗ್ ಲೈನಪ್ ಬದಲಿಸಲಿದೆಯಾ ಕಾದು ನೋಡಬೇಕಿದೆ.