IPL 2024: ಇಂದಿನ ಪಂದ್ಯ RCB vs ಕನ್ನಡಿಗರು..!
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್ 2024) ಇಂದು (ಏ.2) ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ವಿಶೇಷ ಎಂದರೆ ಈ ಎರಡೂ ತಂಡಗಳಲ್ಲೂ ಕನ್ನಡಿಗರು ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಉಭಯ ತಂಡಗಳಲ್ಲಿ ಒಟ್ಟು ಕರ್ನಾಟಕದ ಐವರು ಆಟಗಾರರಿದ್ದಾರೆ.
Updated on: Apr 02, 2024 | 3:52 PM

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 15ನೇ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು (ಏ.2) ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಗಳು ಮುಖಾಮುಖಿಯಾಗಲಿದೆ.

ಈ ಪಂದ್ಯವು ಆರ್ಸಿಬಿ ವರ್ಸಸ್ ಕನ್ನಡಿಗರ ಕದನವಾಗಿ ಮಾರ್ಪಟ್ಟಿದೆ. ಏಕೆಂದರೆ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕರ್ನಾಟಕದ ಮೂವರು ಆಟಗಾರರಿದ್ದಾರೆ. ಅದರಲ್ಲೂ ಲಕ್ನೋ ತಂಡವನ್ನು ಮುನ್ನಡೆಸುತ್ತಿರುವುದು ಕರುನಾಡ ಕುವರ ಕೆಎಲ್ ರಾಹುಲ್.

ಇತ್ತ ಬೆಂಗಳೂರನ್ನು ಪ್ರತಿನಿಧಿಸುವ ಆರ್ಸಿಬಿ ತಂಡದಲ್ಲಿರುವುದು ಕೇವಲ ಇಬ್ಬರು ಕನ್ನಡಿಗರು ಮಾತ್ರ. ಅದರಲ್ಲಿ ಒಬ್ಬರಿಗೆ ಇದುವರೆಗೆ ಒಂದೇ ಒಂದು ಅವಕಾಶ ಸಿಕ್ಕಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಹಾಗಿದ್ರೆ ಉಭಯ ತಂಡಗಳಲ್ಲಿರುವ ಕರ್ನಾಟಕದ ಆಟಗಾರರು ಯಾರೆಲ್ಲಾ ಎಂದು ನೋಡೋಣ...

ಕೆಎಲ್ ರಾಹುಲ್: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ನಮ್ಮ ಬೆಂಗಳೂರಿನ ಹುಡುಗ ಕೆಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದಾರೆ. ಕಳೆದೆರಡು ಸೀಸನ್ಗಳಿಂದ ಎಲ್ಎಸ್ಜಿ ತಂಡವನ್ನು ಮುನ್ನಡೆಸುತ್ತಿರುವ ರಾಹುಲ್ ಮಾಜಿ ಆರ್ಸಿಬಿ ಆಟಗಾರ ಎಂಬುದು ವಿಶೇಷ.

ದೇವದತ್ ಪಡಿಕ್ಕಲ್: ಆರ್ಸಿಬಿ ತಂಡದ ಮಾಜಿ ಆಟಗಾರ ಕರ್ನಾಟಕದ ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ ಇದೀಗ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿದ್ದಾರೆ. ಅಲ್ಲದೆ ಇಂದು ಆರ್ಸಿಬಿ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಕೃಷ್ಣಪ್ಪ ಗೌತಮ್: ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕರ್ನಾಟಕದ ಆಲ್ರೌಂಡರ್ ಆಟಗಾರ ಕೃಷ್ಣಪ್ಪ ಗೌತಮ್ ಕೂಡ ಇದ್ದಾರೆ. ಕಳೆದೆರೆಡು ಸೀಸನ್ಗಳಲ್ಲಿ ರಾಹುಲ್ ನಾಯಕತ್ವದಲ್ಲಿ ಆಡುತ್ತಿರುವ ಗೌತಮ್ ಇಂದು ತವರು ಮೈದಾನದಲ್ಲಿ ಕಣಕ್ಕಿಳಿಯಬಹುದು.

ವಿಜಯಕುಮಾರ್ ವೈಶಾಕ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಇಂದು ಕರ್ನಾಟಕದ ವೇಗಿ ವಿಜಯಕುಮಾರ್ ವೈಶಾಕ್ ಕಣಕ್ಕಿಳಿಯುವುದು ಖಚಿತ. ಏಕೆಂದರೆ ಕಳೆದ ಪಂದ್ಯದಲ್ಲಿ ವೈಶಾಕ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಹೀಗಾಗಿ ಇಂದು ಸಹ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯಲಿದ್ದಾರೆ.

ಮನೋಜ್ ಭಾಂಡಗೆ: ಕಳೆದ ಒಂದು ವರ್ಷದಿಂದ ಆರ್ಸಿಬಿ ತಂಡದಲ್ಲಿದ್ದರೂ ಕರ್ನಾಟಕದ ಯುವ ಆಲ್ರೌಂಡರ್ ಮನೋಜ್ ಭಾಂಡಗೆಗೆ ಐಪಿಎಲ್ಗೆ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿಲ್ಲ. ಇದೀಗ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಯುವ ಆಟಗಾರನಿಗೆ ಚಾನ್ಸ್ ನೀಡಲಿದ್ದಾರಾ ಕಾದು ನೋಡಬೇಕಿದೆ.

ಅಂದರೆ ಇಲ್ಲಿ ಬೆಂಗಳೂರನ್ನು ಪ್ರತಿನಿಧಿಸುವ ಆರ್ಸಿಬಿ ತಂಡದಲ್ಲಿ ಇಬ್ಬರು ಕನ್ನಡಿಗರಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಕರ್ನಾಟಕದ ಮೂವರು ಆಟಗಾರರಿದ್ದಾರೆ. ಹೀಗಾಗಿಯೇ ಇಂದಿನ ಪಂದ್ಯವು RCB vs ಕನ್ನಡಿಗರ ಕದನವಾಗಿ ಮಾರ್ಪಟ್ಟರೂ ಅಚ್ಚರಿಪಡಬೇಕಿಲ್ಲ.



















